ಬೆಂಗಳೂರು: ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು (Ambaari Utsav Bus) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಸೂಚನೆಯನ್ನು ನೀಡಿದರು.
ಅಂಬಾರಿ ಉತ್ಸವ ಬಸ್ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಮಹಿಳೆಯರಿಗೆ ಗೌರವದ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ರೂಪಿಸಲಾಗಿದೆ. ಮಿನಿ ಸ್ಕೂಲ್ ಬಸ್‌ಗಳನ್ನು ಪರಿಚಯಿಸಬೇಕು. ಇರುವ ಬಸ್‌ಗಳ ಸಂಚಾರ ಆರಂಭ ಮಾಡಬೇಕು. ಶಾಲೆ ಆರಂಭವಾಗುವ ಸಂದರ್ಭದಲ್ಲಿ ಪ್ರತಿ ತಾಲೂಕಿನಲ್ಲಿ ಕನಿಷ್ಠ ಐದು ಬಸ್ ಸಂಚಾರ ಆರಂಭ ಮಾಡಬೇಕು. ಅಗತ್ಯ ಬಿದ್ದರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದರು.
ಆರ್ಥಿಕ ಬೆಳವಣಿಗೆಯಲ್ಲಿ ಸಂಚಾರ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ಬಾರಿಯ ಬಜೆಟ್‌ನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಉಚಿತ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದು, ಸರ್ಕಾರ ನೌಕರ ವರ್ಗ ಹಾಗೂ ಆಡಳಿತ ಮಂಡಳಿ ಜತೆಗಿರುತ್ತದೆ ಎಂದರು.
ಅಂಬಾರಿ ಲೋಕಾರ್ಪಣೆ
ಹೊಸ ಸಂಚಾರದ ವಿಶೇಷವಾಗಿ ಒಂದು ಪಡೆ ಅಂಬಾರಿಯನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದ್ದು, ದೂರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಯಲ್ಲಿವುದಕ್ಕಿಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ವೋಲ್ವೊ ಬಸ್‌ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ಅರಿತು ಈ ಬಸ್‌ಗಳಲ್ಲಿ ಮಲ್ಟಿ ಎಕ್ಸೆಲ್ ವ್ಯವಸ್ಥೆ ಕಲ್ಪಿಸಿ, ಉತ್ತಮ ವ್ಯವಸ್ಥೆ ರೂಪಿಸಲಾಗಿದೆ. ಸುಲಭವಾಗಿ, ಸುಖವಾಗಿ ರಾತ್ರಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯ ಸಾರಿಗೆಗೆ ಇನ್ನಷ್ಟು ಬಸ್ಸುಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ಖಾಸಗೀಕರಣದಿಂದ ಪೈಪೋಟಿ ಹೆಚ್ಚಾಗಿದೆ
ಕೆ.ಎಸ್.ಆರ್.ಟಿ.ಸಿ ತನ್ನದೇ ಇತಿಹಾಸವನ್ನು ಹೊಂದಿದ್ದು, ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಕೆಂಪು ಬಸ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದುದ್ದನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ, ಆಗ ಡ್ರೈವರ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಗ್ರಾಮೀಣ ಜನರು ತಮ್ಮ ಪ್ರಯಾಣವನ್ನು ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ. ಇಂಥ ಸೇವೆಯು ಇಂದು ಖಾಸಗೀಕರಣದಿಂದ ಪೈಪೋಟಿ ಎದುರಿಸುತ್ತಿದೆ.
ಖಾಸಗಿಯವರು ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸುತ್ತಾರೆ. ಸಾಮಾಜಿಕವಾಗಿ ಕೆಲಸ ಮಾಡುವ ಮಾರ್ಗಗಳನ್ನು ಕೆಎಸ್‌ಆರ್‌ಟಿಸಿಗೆ ಬಿಡುತ್ತಾರೆ. ಹೀಗಾಗಿ ಸೇವಾ ವಲಯದಲ್ಲಿಯೂ ಹಾಗೂ ವಾಣಿಜ್ಯ ಮಾರ್ಗಗಳಲ್ಲಿಯೂ ಸಂಚರಿಸಿ ನಿಗಮವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದರು.
ಸೋರಿಕೆ ತಡೆಗಟ್ಟಿ ಆದಾಯ ಹೆಚ್ಚಿಸಿ
ಬರುವ ದಿನಗಳಲ್ಲಿ ನಿಗಮ ಬಹಳ ದೊಡ್ಡ ಬದಲಾವಣೆಯನ್ನು ಕಾಣುವ ವಿಶ್ವಾಸವಿದೆ. ತನ್ನದೇ ಶಕ್ತಿಯ ಮೇಲೆ ನಿಲ್ಲಬೇಕೆನ್ನುವುದು ನಮ್ಮ ಅಭಿಲಾಷೆ. ಹಿಂದೆ ಇದ್ದಂತೆಯೇ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಕೋವಿಡ್ ಹಾಗೂ ನಂತರದಲ್ಲಿ ಎಲ್ಲ ರಂಗಗಳಲ್ಲಿ ಕುಸಿತ ಕಂಡಿತು. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಸಾಕಷ್ಟು ತೊಂದರೆ ಅನುಭವಿಸಿತ್ತು. ಆಗ ಸರ್ಕಾರ ಸಂಪೂರ್ಣವಾಗಿ ಹಣಕಾಸಿನ ಬೆಂಬಲ ನೀಡಿತ್ತು. 2 ವರ್ಷವೂ ಬೆಂಬಲ ನೀಡಿ ನೌಕರರಿಗೆ ವೇತನ, ಡೀಸೆಲ್ ಬಿಲ್ ಗೆ ಅನುದಾನ ಒದಗಿಸಲಾಗಿದೆ. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ 4600 ಕೋಟಿ ರೂ. ನೀಡಲಾಗಿದೆ. ಇತ್ತೀಚೆಗೆ ಒಂದು ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧವಿದ್ದು, ತೆರಿಗೆ ವಿನಾಯಿತಿ ನೀಡಲು ಕೂಡ ಸಿದ್ಧವಿದೆ ಎಂದು ಹೇಳಿದರು.
ನಿಗಮಗಳು ವಾಣಿಜ್ಯ ಮಾರ್ಗಗಳ ಸಂಚಾರ ಹಾಗೂ ಸೋರಿಕೆ ತಡೆಯುವ ಮೂಲಕ ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡಬೇಕು. ಖರೀದಿಯಲ್ಲಿನ ಪಾರದರ್ಶಕತೆ ತರಬೇಕು. ಬಿಡಿ ಭಾಗ, ಆಯಿಲ್, ಟೈರ್ ಖರೀದಿಯಲ್ಲಿ ಪಾರದರ್ಶಕತೆ ತಂದು ವೆಚ್ಚವನ್ನು ಕಡಿಮೆ ಮಾಡಬೇಕು. ಸಾರಿಗೆ ಸಂಸ್ಥೆಯನ್ನು ಮತ್ತೊಮ್ಮೆ ಲಾಭದಾಯಕವಾಗಿ ನಡೆಸಬೇಕು ಎಂಬ ಅಭಿಲಾಷೆಗೆ ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಹೇಳಿದರು.
ಸಿಬ್ಬಂದಿ ವೇತನ ಹೆಚ್ಚಳ
ಸಿಬ್ಬಂದಿಯ ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸಿನ ಇತಿಮಿತಿಯಲ್ಲಿ ನೌಕರರೊಂದಿಗೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ತಂತ್ರಜ್ಞಾನ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಪ್ರಯಾಣಿಕರ ಆಯ್ಕೆಗಳು ಬದಲಾಗುತ್ತಿದೆ. ಇದನ್ನು ಗಮನಿಸಿ, ಖಾಸಗಿಯವರೊಂದಿಗೆ ಪೈಪೋಟಿ ಮಾಡಿ ಅವರಿಗಿಂತ ಹೆಚ್ವು ಸೇವೆ ನೀಡಿ ಜನಮನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ನಡೆಯಾಗಿದೆ. ಇದರ ಕಾರ್ಯಸೂಚಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: Bangalore Power Cut: ಮೂರು ದಿನ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಇರಲ್ಲ; ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ
ಕಂದಾಯ ಸಚಿವ ಆರ್.ಅಶೋಕ್, ಕೆ.ಎಸ್.ಆರ್.ಟಿ. ಸಿ ಅಧ್ಯಕ್ಷ ಚಂದ್ರಪ್ಪ , ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಶಾಸಕರಾದ ಸೋಮಶೇಖರ್ ರೆಡ್ಡಿ, ಸತೀಶ್ ರೆಡ್ಡಿ, ಯಾದವ್, ನಿವೃತ್ತ ಐ.ಎ.ಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ