ಕಾರವಾರ: ಏ. 14ರಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಾಗಿರುವುದರಿಂದ (Ambedkar Jayanti) ಆನಂತರವೇ ಚುನಾವಣಾ ನೀತಿ ಸಂಹಿತೆಯನ್ನು ಘೋಷಿಸಲು ಮತ್ತು ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಕೋರಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಚುನಾವಣಾ ಆಯೋಗದ ಆಯುಕ್ತರಿಗೆ ಮನವಿ ನೀಡಲಾಗಿದೆ.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಯಲಕಪಾಟಿ ನೇತೃತ್ವದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, “ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಘೋಷಣಾ ದಿನಾಂಕದ ಬಗ್ಗೆ ಕೆಲವು ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ. ಏ.10ರಿಂದ ನೀತಿ ಸಂಹಿತೆ ಜಾರಿಯು ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ ಎಂಬಂತೆ ಬಿಂಬಿತವಾಗುತ್ತಿರುವುದು ಗೊಂದಲಗಳಿಗೆ ಕಾರಣವಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Insulin Injection: ವಾರಕ್ಕೊಮ್ಮೆ ತೆಗೆದುಕೊಳ್ಳುವ ಇನ್ಸುಲಿನ್ ಇನ್ನೆರಡು ವರ್ಷಗಳಲ್ಲಿ ಮಾರುಕಟ್ಟೆಗೆ
“ಏ. 14ರಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಇದ್ದು, ಸಾರ್ವಜನಿಕರು ಜಗತ್ತಿನಾದ್ಯಂತ ಸಂಭ್ರಮ- ಸಡಗರದಿಂದ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುವುದು ವಾಡಿಕೆ. ಆದರೆ, ನೀತಿ ಸಂಹಿತೆ ಜಾರಿಯಿಂದ ಜಯಂತಿ ಆಚರಣೆಗೆ ತೊಡಕಾಗಲಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆಯನ್ನು ಏ.20ರ ನಂತರ ಘೋಷಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಇಲ್ಲವೇ ಚುನಾವಣಾ ನೀತಿ ಸಂಹಿತೆಯ ಯಾವುದೇ ನಿರ್ಬಂಧ ಅಂಬೇಡ್ಕರ್ ಜಯಂತಿ ಆಚರಣೆಗೆ ಅನ್ವಯವಾಗುವುದಿಲ್ಲ ಎಂದು ಘೋಷಿಸಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಹಾಗೂ ಅವರ ಜಯಂತಿಯನ್ನು ಆಚರಣೆ ಮಾಡುವ ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಶಂಕರ ಸಿ.ವಡ್ಡರ, ಮಾರುತಿ ನಾಯ್ಕ, ಜಾಫರ್ ಖರ್ಜಗಿ, ಯಲ್ಲಪ್ಪ ವಡ್ಡರ, ಶಾಂತಾ ವಡ್ಡರ, ದ್ಯಾಮವ್ವ ವಡ್ಡರ, ಚಂದ್ರಪ್ಪ ಕುಬಡೆ, ಕೆಂಪಣ್ಣ ಮಣ್ಣವಡ್ಡರ ಮುಂತಾದವರು ಹಾಜರಿದ್ದರು.
ಇದನ್ನೂ ಓದಿ: Actress Samantha : ಸ್ಟ್ರಾಂಗ್ ಆಗುತ್ತಿದ್ದಾರೆ ಸಮಂತಾ; ಇಲ್ಲಿದೆ ನೋಡಿ ಸಾಕ್ಷಿ