ಬೆಂಗಳೂರು: ಭಾರತ ಸ್ವಾತಂತ್ರ್ಯ ಪಡೆಯುವುದರ ಹಿಂದೆ ಲಕ್ಷಾಂತರ ಜನರ ತ್ಯಾಗ, ಬಲಿದಾನಗಳಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Amrit Mahotsav) ಆಚರಣೆಗೆ ಕರೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಮತ್ತು ದಿಶಾ ಭಾರತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕಳೆದ 75 ವರ್ಷಗಳಲ್ಲಿ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ಇದೊಂದು ಅಮೃತ ಕಾಲ ಎಂದು ಘೋಷಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದ್ದರೂ ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಪ್ರತಿಭೆಗಳ ಕೊರತೆ ಉಂಟಾಗಿದೆ ಎಂದರು.
ಇದನ್ನೂ ಓದಿ | ಕ್ರಾಂತಿಯ ಕಿಡಿಗಳು ಅಂಕಣ | 24 ವರ್ಷ ಸೆರೆಯಲ್ಲಿದ್ದ ಸ್ವಾತಂತ್ರ್ಯ ಸೇನಾನಿ ಸೇತುಪತಿ
ನಾವು ಜ್ಞಾನವನ್ನು ಸಂಪಾದಿಸಬೇಕು. ಆ ಜ್ಞಾನವನ್ನು ಮಂಡಿಸಬೇಕು. ಮಂಡಿಸಿದ ವಿಚಾರಕ್ಕೆ ಬದ್ಧವಾಗಿರಬೇಕು. ಈ ನಿಟ್ಟಿನಲ್ಲಿ ದಿಶಾ ಭಾರತ ಸಂಸ್ಥೆಯು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಇದು ಅನುಷ್ಠಾನವಾಗಬೇಕು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ
ತರಗತಿಯ ಕಲಿಕೆಯಿಂದ ಹೊರಬಂದರೆ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಎನ್ಇಪಿ ಜಾರಿಗೆ ತರಲಾಗಿದೆ. ಈ ನಾಡಿನಲ್ಲಿ ಪ್ರತಿಯೊಬ್ಬ ಯುವಕರೂ ಕೌಶಲ ಹೊಂದಬೇಕು. ಆ ಮೂಲಕ ಪ್ರತಿಯೊಬ್ಬರೂ ಉದ್ಯೋಗ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ಕುಮಾರ್ ಮಾತನಾಡಿ, ಮನೆಗಿಂತ ದೊಡ್ಡ ವಿಶ್ವವಿದ್ಯಾಲಯ ಮತ್ತೊಂದಿಲ್ಲ. ಮನೆಯ ಸಂಸ್ಕೃತಿಯಿಂದ ಕಲಿಯದ ಪಾಠ ಬೇರೆ ಎಲ್ಲಿಂದಲೂ ಕಲಿಯಲು ಸಾಧ್ಯವಿಲ್ಲ. ದಾನ, ಧರ್ಮದ ಬಗ್ಗೆ ಯಾವ ವಿಶ್ವವಿದ್ಯಾಲಯದಲ್ಲಿ ಕಲಿಸುವುದಿಲ್ಲ. ಆದರೆ ನಮ್ಮ ಹಳ್ಳಿಗಳಲ್ಲಿರುವ ರೈತರು ಬೆಳೆ ಬಂದಾಗ ಬಡವರಿಗೆ ದಾನ ಮಾಡಿ ನಂತರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಪರಂಪರಾಗತದಿಂದ ಇಂತಹ ಗುಣಗಳನ್ನು ಕಲಿಸಿದ್ದು ಭಾರತ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಂ.ಜಯಕರ, ಕುಲಸಚಿವ ಡಾ.ಎಂ.ಕೊಟ್ರೇಶ್, ದಿಶಾ ಭಾರತ್ ಅಧ್ಯಕ್ಷ ಡಾ.ಎನ್.ವಿ.ರಘುರಾಮ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಪ್ರತಿದಿನ 1.5 ಲಕ್ಷ ಧ್ವಜ ತಯಾರಿಸುವ ʻಬಾವುಟದ ಮಾಮʼ