ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರಿ ವಿವಾದದ ಕೇಂದ್ರ ಬಿಂದುವಾಗಿದ್ದ ಬೆಂಗಳೂರಿನ ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಸೋಮವಾರ ಸಂಭ್ರಮ, ಸಡಗರ ಮತ್ತು ಭಕ್ತಿಯೊಂದಿಗೆ ರಾಷ್ಟ್ರ ಧ್ವಜಾರೋಹಣ ನಡೆಸಲಾಯಿತು. ಇದು ವಕ್ಫ್ ಬೋರ್ಡ್‌ಗೆ ಸೇರಿದ ಜಾಗವೆಂಬ ವಾದ, ಸಾರ್ವಜನಿಕ ಆಟದ ಮೈದಾನವೆಂಬ ಪ್ರತಿವಾದಗಳ ನಡುವೆ ಅಂತಿಮವಾಗಿ ಇದು ಕಂದಾಯ ಭೂಮಿ, ಬಿಬಿಎಂಪಿ ಸ್ವತ್ತು ಎಂಬ ಆದೇಶ ಹೊರಬಿದ್ದಿತ್ತು. ಈ ನಡುವೆ, ಇಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಎರಡು ಗುಂಪುಗಳ ನಡುವೆ ಪೈಪೋಟಿ ಶುರುವಾದಾಗ ಸ್ವತಃ ಸರಕಾರವೇ ಮುಂದೆ ನಿಂತು ಸಹಾಯಕ ಕಮೀಷನರ್ ಮೂಲಕ ಧ್ವಜಾರೋಹಣ ನಡೆಸಿದೆ.
ಸೋಮವಾರ ಮುಂಜಾನೆ ೮ ಗಂಟೆಗೆ ಇಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಿತು. ಕಂದಾಯ ಇಲಾಖೆ ಸಹಾಯಕ ಕಮಿಷನರ್ ಆಗಿರುವ ಶಿವಣ್ಣ ಅವರು ಧ್ವಜಾರೋಹಣ ನಡೆಸಿದರು. ಸಾವಿರಾರು ವಿದ್ಯಾರ್ಥಿಗಳು, ನೂರಾರು ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಭದ್ರತೆಯ ಸರ್ಪಗಾವಲಿನಲ್ಲಿ ತ್ರಿವರ್ಣ ಧ್ವಜ ಮುಗಿಲೆತ್ತರ ಹಾರುತ್ತಿದ್ದಂತೆಯೇ ಬೋಲೋ ಭಾರತ್ ಮಾತಾಕೀ ಜೈ ಎಂಬ ಜಯಘೋಷವೂ ಮುಗಿಲಲ್ಲಿ ಮಾರ್ದನಿಸಿತು.
ಸಂಸದ ಪಿ.ಸಿ. ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಧ್ವಜಾರೋಹಣದ ವೇಳೆ ಉಪಸ್ಥಿತರಿದ್ದರು.
ಸರ್ವರ ಸೇರುವಿಕೆಯಿಂದ ಸಂಭ್ರಮ
ಕಾರ್ಯಕ್ರಮದಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರು, ಹಲವು ಒಕ್ಕೂಟಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಚಾಮರಾಜಪೇಟೆಯ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಅವರು ಸಾರ್ವಜನಿಕರಾಗಿ ಮೀಸಲಿಟ್ಟ ಜಾಗದಲ್ಲಿ ಬಂದು ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಒಟ್ಟಾರೆಯಾಗಿ ಕಾರ್ಯಕ್ರಮ ಬಿಗಿ ಭದ್ರತೆಯಲ್ಲಿಯೂ ಅದ್ಧೂರಿಯಾಗಿ ನಡೆಯಿತು. ಧ್ವಜಾರೋಹಣದ ಬಳಿಕ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.