ಬೆಂಗಳೂರು: ದಿಶಾ ಭಾರತ ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ “ ನನ್ನ ಭಾರತ ” ರಾಷ್ಟ್ರೀಯ ಮಟ್ಟದ ಯುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಅಭಿಯಾನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಹಿಂದಿನವರು ದೊಡ್ಡಮಟ್ಟದ ತ್ಯಾಗ, ಬಲಿದಾನಗಳನ್ನು ಮಾಡಿ ನಮಗೆ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಆ ಮೂಲಕ ಅವರು ನಮಗೆ ಕೊಟ್ಟಿರುವ ಸಂದೇಶವನ್ನು ನಾವು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಮೊಳಗಿಸಬೇಕಿದೆ ಎಂದರು.
ಸದ್ಯ ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಸುಶಿಕ್ಷತರು ಸ್ವಕೇಂದ್ರೀತರಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಸ್ವಾಮಿ ವಿವೇಕಾನಂದರಂತವರು ನಮಗೆ ದೇಶಭಕ್ತಿಯ ವಿಷಯದಲ್ಲಿ ಸ್ಫೂರ್ತಿಯಾಗಬೇಕು. ನಾವು ಪಡೆವ ಶಿಕ್ಷಣದ ಹಿಂದೆ ಸದುದ್ದೇಶ ಇರುವುದು ಮುಖ್ಯ ಎಂದು ಸಚಿವರು ಹೇಳಿದರು.
ಇಡೀ ಪ್ರಪಂಚಕ್ಕೆ ಬೇಕಿರುವ ತಂತ್ರಜ್ಞಾನವನ್ನು ಭಾರತೀಯರಾದ ನಾವು ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ ಅದರ ಮಾಲೀಕತ್ವ ವಿದೇಶೀಯರ ಕೈಯಲ್ಲಿದೆ. ಐಟಿ/ಬಿಟಿ, ಮಷೀನ್ ಟೂಲ್, ಬಾಹ್ಯಾಕಾಶ ಹೀಗೆ ಎಲ್ಲದರಲ್ಲೂ ಮುಂದಿದ್ದೇವೆ ನಿಜ. ಆದರೆ ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಪ್ರತಿಭಾವಂತರು ಸಂಖ್ಯೆ ಇನ್ನೂ ಹೆಚ್ಚಾಗಬೇಕಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.
ಚಾರ್ಲಿ-777 ಸಿನಿಮಾ ನಿರ್ದೇಶಕ ಕಿರಣ್ ರಾಜ್ ಕೆ. ಮಾತನಾಡಿದರು. ದಿಶಾ ಭಾರತ್ ಸಂಸ್ಥೆಯ ರಘುರಾಮ್, ರೇಖಾ, ನಾಗರಾಜ್, ವಿಶ್ರಾಂತ ಉಪ ಕುಲಪತಿ ವೇಣುಗೋಪಾಲ್, ನೃಪತುಂಗ ವಿ.ವಿ.ಯ ಉಪ ಕುಲಪತಿ ಶ್ರೀನಿವಾಸ ಬಳ್ಳಿ, ಮಹಾರಾಣಿ ವಿ.ವಿ. ಉಪ ಕುಲಪತಿ ಡಾ.ಗೋಮತಿ ದೇವಿ, ರಾಜೇಶ್, ಸ್ವಾಮಿ ವಿವೇಕಾನಂದ ಯುವಕೇಂಧ್ರದ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಅಮೃತ ಭಾರತಿಗೆ ಕನ್ನಡದಾರತಿ: ರಾಜ್ಯಾದ್ಯಂತ ಮೊಳಗಿದ ಸ್ವಾತಂತ್ರ್ಯ ಕಹಳೆ