Site icon Vistara News

ಹಿಮಾಲಯದ ಅಪಾಯಕಾರಿ ಸರ್ಪಾಸ್​ ಶಿಖರವೇರಿದ ಬೆಂಗಳೂರಿನ 11 ವರ್ಷದ ಪೋರಿ

An 11-year-old girl from Bangalore has climbed the dangerous Sarpas of the Himalayas

#image_title

ಬೆಂಗಳೂರು: ಹಿಮಗಳಿಂದಲೇ ಆವೃತ್ತವಾಗಿರುವ ಹಿಮಾಲಯದ ಪರ್ವತ ಶ್ರೇಣಿಗಳನ್ನು ನೋಡುವುದು ಚಂದ. ಅದನ್ನು ಏರಬೇಕೆಂಬ ಕನಸು ಕಾಣುವುದೂ ಸುಲಭ. ಆದರೆ, ಅದನ್ನು ನನಸಾಗಿಸುವುದು ಸರಳವಲ್ಲ. ಯಾಕೆಂದರೆ ಮೈನಸ್​ ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರುವ ಇಲ್ಲಿನ ಪರ್ವತಗಳಲ್ಲಿ ಎಲ್ಲಿ ನೋಡಿದರೂ ಪ್ರಪಾತಗಳು. ಜತೆಗೆ ಹಿಮಪಾತದ ಅಪಾಯವೂ ಇದೆ. ಆದರೆ, ಬೆಂಗಳೂರಿನ 11 ವರ್ಷದ ಬಾಲಕಿಯೊಬ್ಬಳು ಹಿಮಾಲದ ಪರ್ವತ ಶ್ರೇಣಿಯಲ್ಲಿ ಬರುವ ಸಮುದ್ರ ಮಟ್ಟಕ್ಕಿಂತ 14000 ಅಡಿ ಎತ್ತರದ ಸರ್ಪಾಸ್​ ಪರ್ವತವನ್ನೇರಿ ಸಾಧನೆ ಮಾಡಿದ್ದಾಳೆ. ಅಂದ ಹಾಗೆ ಇಂಥದ್ದೊಂದು ದೊಡ್ಡ ಕನಸನ್ನು ನನಸಾಗಿದ ಬಾಲೆಯ ಹೆಸರು ಶ್ರೀಕನಸು. ಈಕೆ ಪುಸ್ತಕೋದ್ಯಮಿ ವೀರಕಪುತ್ರ ಶ್ರೀನಿವಾಸ್​- ಶೋಭಾ ದಂಪತಿಯ ಪುತ್ರಿ. ಕೋರಮಂಗಲದ ಚಿನ್ಮಯಿ ವಿದ್ಯಾಲಯದ ವಿದ್ಯಾರ್ಥಿನಿ.

ರಂಗಕರ್ಮಿ ಕಿರಣ್​ವಟಿ, ಕಲಾಸರಥ ಎಂಬ ಟ್ರೆಕಿಂಗ್ ಸಂಸ್ಥೆಯ ಕರ್ನಾಟಕ ವಿಭಾಗ ನೇತೃತ್ವ ವಹಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ವಟಿ ನೇತೃತ್ವದ ತಂಡದಿಂದ ಸರ್ಪಾಸ್​ ಪರ್ವತಕ್ಕೆ ಟ್ರೆಕಿಂಗ್ ಆಯೋಜಿಸಲಾಗಿತ್ತು. ಅವರೊಂದಿಗೆ ಟ್ರೆಕಿಂಗ್ ತೆರಳಲು ವೀರಕಪುತ್ರ ಶ್ರೀನಿವಾಸ್​ ದಂಪತಿ ನೋಂದಣಿ ಮಾಡಿಕೊಂಡಿದ್ದರು. ಅವರಿಗೆ ತಮ್ಮ ಪುಟಾಣಿ ಮಗಳನ್ನು ಕರೆದುಕೊಂಡು ಹೋಗುವ ಉದ್ದೇಶವಿರಲಿಲ್ಲ. ಆದರೆ ಪೋಷಕರ ಸಿದ್ಧತೆಯನ್ನು ನೋಡಿದ ಶ್ರೀಕನಸು ನಾನೂ ಹಿಮಾಲಯ ಏರುವೆ ಎಂಬ ಹುಮ್ಮಸ್ಸಲಿನಲ್ಲಿ ಹೊರಟಿದ್ದಳು. ಪುತ್ರಿಯ ಧೈರ್ಯ ನೋಡಿದ ದಂಪತಿ ಅವಳನ್ನೂ ಜೊತೆಗೆ ಕರೆದೊಯ್ದಿದ್ದಾರೆ.

ಪ್ರವಾಸ ಎಲ್ಲಿಂದ ಆರಂಭ?

ಸರ್ಪಾಸ್​ ಪರ್ವತದ ಟ್ರೆಕಿಂಗ್​ ಹಿಮಾಚಲ ಪ್ರದೇಶದ ಕಸೋಲ್​ ಎಂಬ ಜಾಗದಿಂದ ಆರಂಭಗೊಂಡಿತ್ತು. ಮೊದಲ ದಿನದ ಅಂತ್ಯಕ್ಕೆ ತಂಡ ಗ್ರಹಣ್ ಎಂಬ ಪ್ರದೇಶಕ್ಕೆ ತಲುಪಿತ್ತು. ಎರಡನೇ ದಿನ ಟ್ರೆಕಿಂಗ್​ ಮುಕ್ತಾಯಗೊಂಡಿದ್ದು ಪದ್ರಿ ಎಂಬ ಜಾಗದಲ್ಲಿ. ಮೂರನೇ ದಿನ ಆರೋಹಣ ಪ್ರಕ್ರಿಯೆ ಕಠಿಣವಾಗತೊಡಗಿತು. ಸಮುದ್ರ ಮಟ್ಟಕ್ಕಿಂತ 11, 541 ಅಡಿ ಎತ್ತರವಿರುವ ಮಿಂಜ್​ ತಾಜ್​ ಎಂಬ ಪ್ರದೇಶಕ್ಕೆ ಅವರೆಲ್ಲರೂ ತಲುಪಿದ್ದರು. ಮುಂದಿನ ಹಾದಿ ಸುಗಮವಾಗಿರಲಿಲ್ಲ.

ತಂಡದಲ್ಲಿದ್ದ 9 ಮಂದಿಯಲ್ಲಿ ಇಬ್ಬರು ತಮ್ಮ ಟ್ರೆಕಿಂಗ್​ ಮೊಟಕುಗೊಳಿಸಿ ಮರಳಿದರು. ಯಾಕೆಂದರೆ ತಾಪಮಾನ ಆಗಲೇ ಮೈನಸ್​6 ಡಿಗ್ರಿ ಸೆಲ್ಸಿಯಸ್​ ಇತ್ತು. ಜತೆಗೆ ಕಡಿದಾದ ಪರ್ವತ. ಮಂಜಿನ ಮೇಲೆ ಕಾಲಿಟ್ಟರೆ ಎರಡು ಅಡಿ ಹೂತು ಹೋಗುತ್ತಿತ್ತು. ಜತೆಗೆ ಹಿಮ ಕರಗಿ ಪ್ರವಾಹ ಉಂಟಾಗುವ ಭಯವೂ ಇತ್ತು. ಆದರೆ, ಶ್ರೀಕನಸು ನಾನು ಸರ್ಪಾಸ್​ ಪರ್ವತ ಏರಿಯೇ ಸಿದ್ಧ ಎಂದಳು.

ಇದನ್ನೂ ಓದಿ : ರಾಜಮಾರ್ಗ ಅಂಕಣ : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ಭಾರತೀಯ ವಿಜ್ಞಾನಿ ಗಟಗಟನೆ ಕುಡಿದಿದ್ದರು!

ಬಿಸಿಲು ಬಂದ ಬಳಿಕ ಹಿಮ ಕರಗುವ ಸಾಧ್ಯತೆಗಳು ಹೆಚ್ಚು ಎಂಬ ಕಾರಣಕ್ಕೆ ಸರ್ಪಾಸ್​ ಪರ್ವತಾರೋಹಣ ಬೆಳಗ್ಗೆ ಬೇಗ ಆರಂಭಗೊಂಡಿತ್ತು. ತಂಡದಲ್ಲಿ ಉಳಿದಿದ್ದ ಏಳು ಮಂದಿಯಲ್ಲಿ ಎಲ್ಲರಿಗಿಂತ ಮುಂದೆ ಸಾಗಿ ಶ್ರೀಕನಸು ತನ್ನ ಕನಸು ನನಸಾಗಿಸಿಕೊಂಡಳು. ಸರ್ಪಾಸ್​ ಸರೋವರದ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟಳು.

ಎಲ್ಲ ಸವಾಲುಗಳನ್ನು ಮೀರಿ, ಎಲ್ಲರಿಗಿಂತ ಮೊದಲು ಶ್ರೀಕನಸು ಸರ್ಪಾಸ್​ ಸರೋವರದ ಬಳಿಗೆ ತಲುಪಿದ್ದು ಹೆಚ್ಚುಗಾರಿಕೆ ಎಂದು ಶೋಭಾ, ಶ್ರೀನಿವಾಸ್ ದಂಪತಿ ಹೇಳುತ್ತಾರೆ.

Exit mobile version