Site icon Vistara News

ನನ್ನ ರಾಜಕೀಯ ಗುರು ಅನಂತಕುಮಾರ್‌, ಜನ್ಮದಿನದ ಕಾರ್ಯಕ್ರಮದಲ್ಲಿ ಜಗದೀಶ್‌ ಶೆಟ್ಟರ್‌ ಸ್ಮರಣೆ

ಬೆಂಗಳೂರು: “ನನ್ನ ರಾಜಕೀಯ ಗುರು ದಿವಂಗತ ಅನಂತಕುಮಾರ್‌. ಅವರಿರದಿದ್ದರೆ ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸ್ಮರಿಸಿದರು. ಬೆಂಗಳೂರಿನ ವಿವಿ ಪುರಂನಲ್ಲಿ ನಡೆದ ಅನಂತಕುಮಾರ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಅನಂತಕುಮಾರ್‌ ಅವರ ಜತೆ ಇದ್ದ ಒಡನಾಟ ಸೇರಿ ಹಲವು ವಿಷಯಗಳನ್ನು ಹಂಚಿಕೊಂಡರು.

“ಅನಂತಕುಮಾರ್‌ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಸಾರ್ವಜನಿಕ ಜೀವನದಲ್ಲೂ ಅವರು ಹೆಚ್ಚು ಸಕ್ರಿಯರಾಗಿದ್ದರು. ಅನಂತಕುಮಾರ್‌ ಅವರ ಎಲ್ಲ ಸಾಧನೆಗೆ ತೇಜಸ್ವಿನಿ ಅನಂತಕುಮಾರ್‌ ಅವರೇ ಕಾರಣ. ಇದನ್ನು ಅನಂತಕುಮಾರ್‌ ಅವರೇ ಅನೇಕ ಬಾರಿ ಹೇಳಿದ್ದರು” ಎಂದರು.

“ನನ್ನ ರಾಜಕೀಯ ಬೆಳವಣಿಗೆಗೆ ಅವರೇ ಕಾರಣ. ಅವರು ನನ್ನ ರಾಜಕೀಯ ಗುರು. ಹುಬ್ಬಳ್ಳಿಗೆ ಬಂದಾಗ, ನೀವು ರಾಜಕೀಯಕ್ಕೆ ಬನ್ನಿ ಎಂದು ನನಗೆ ಹೇಳಿದ್ದರು. ನಾನು ಕಾನೂನು ಓದುತ್ತಿದ್ದೇನೆ, ರಾಜಕೀಯ ಬೇಡ ಎಂದು ಹಲವು ಬಾರಿ ಹೇಳಿದ್ದೆ. ಆದರೆ, ಮಹದಾಯಿ, ಹುಬ್ಬಳ್ಳಿ ಈದ್ಗಾ ಮೈದಾನದ ಹೋರಾಟದ ಮೂಲಕ ರಾಜಕೀಯಕ್ಕೆ ಬಂದೆ. ರಾಜಕೀಯದಲ್ಲಿ ಏಳಿಗೆ ಹೊಂದಲು ಅನಂತಕುಮಾರ್‌ ಅವರೇ ಕಾರಣ” ಎಂದು ಸ್ಮರಿಸಿದರು.

ಬಿಜೆಪಿ ಏಳಿಗೆ ಹಿಂದಿದೆ ಶ್ರಮ

“ಅನಂತಕುಮಾರ್‌ ಅವರು ರಾಜ್ಯ ಹಾಗೂ ಕೇಂದ್ರದ ಕೊಂಡಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯದಲ್ಲಿ ಬಿಜೆಪಿ ಏಳಿಗೆ ಹೊಂದಲು ಅವರ ಪರಿಶ್ರಮವೂ ಹೆಚ್ಚಿದೆ. ಬಿ.ಎಸ್‌.ಯಡಿಯೂರಪ್ಪನವರ ಸಂಘಟನಾ ಶಕ್ತಿ ಹಾಗೂ ಅನಂತಕುಮಾರ್‌ ಅವರ ಬುದ್ಧಿವಂತಿಕೆಯಿಂದಾಗಿ ಪಕ್ಷವು ರಾಜ್ಯದಲ್ಲಿ ಬಲವರ್ಧನೆಗೊಂಡಿತು” ಎಂದು ಹೇಳಿದರು.

ರಾಜ್ಯದ ಹಿತಾಸಕ್ತಿಗೆ ಆದ್ಯತೆ

“ಕರ್ನಾಟಕದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ರಾಜ್ಯದ ಹಿತಾಸಕ್ತಿಗಾಗಿ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವೇ ಇದ್ದರೂ ಬೆಂಬಲ ನೀಡುವ ಕೆಲಸ ಮಾಡುತ್ತಿದ್ದರು. ಅದರಲ್ಲೂ, ಉತ್ತರ ಕರ್ನಾಟಕದ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇತ್ತು. ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ನೈರುತ್ಯ ರೈಲ್ವೆ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಮಾಡಿಸಬೇಕು ಎಂದು ಹೇಳಿದ್ದರು. ಅದರಂತೆ ಹುಬ್ಬಳ್ಳಿಗೆ ರೈಲ್ವೆ ಕಚೇರಿ ಮಾಡಿಸಿಕೊಟ್ಟರು. ಅವರು ಇಂದು ನಮ್ಮ ಜತೆಗೆ ಇರದಿದ್ದರೂ, ಅವರ ಚಿಂತನೆಗಳು ನಮ್ಮೊಂದಿಗಿವೆ. ಅನಂತಕುಮಾರ್‌ ಅವರ ಪ್ರತಿಷ್ಠಾನಕ್ಕೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಲಿ” ಎಂದರು.

ಇದನ್ನೂ ಓದಿ | ದಿ.ಅನಂತಕುಮಾರ್‌ ಜನ್ಮದಿನಾಚರಣೆ; ಅನಂತಯಾನ ಕೃತಿ ಲೋಕಾರ್ಪಣೆ

Exit mobile version