Site icon Vistara News

Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ

Ancient remains

#image_title

ಶಿವಮೊಗ್ಗ: ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಸಮೀಪದ ಕರ್ನಲ್ಲಿ ಗ್ರಾಮದಲ್ಲಿ ರಾಷ್ಟ್ರಕೂಟರ ಅವಧಿಯ ಹಲವಾರು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಊರನಕಟ್ಟೆ ಬಳಿಯ ಜಮೀನಿನಲ್ಲಿ 10 ಹಾಗೂ ಇದೇ ಗ್ರಾಮದ ಕಲ್ಕಟ್ಟೆಯಲ್ಲಿ 4 ಗೋಸಾಸ ಕಲ್ಲುಗಳು ಮತ್ತು 8ನೇ ಶತಮಾನದ ಗಜಲಕ್ಷ್ಮಿ ಫಲಕ ಮತ್ತು ಕೋಣನತಲೆ ಶಿಲ್ಪವನ್ನು ಶೋಧಿಸಲಾಗಿದೆ.

ಊರನಕಟ್ಟೆ ಬಳಿಯ ಜಮೀನಿನಲ್ಲಿ 9 ಗೋಸಾಸ ಕಲ್ಲುಗಳನ್ನು ಮೂರರ ಒಂದು ಸಾಲಿನಂತೆ ಮೂರು ಸಾಲುಗಳಲ್ಲಿ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಒಂದು ಗೋಸಾಸಕಲ್ಲು ಅಲ್ಪ ಚದುರಿದೆ. ಈ ಗೋಸಾಸ ಕಲ್ಲುಗಳ ಗಾತ್ರವು ಬೇರೆ ಬೇರೆಯಾಗಿದ್ದು, ಒಂದು ಬೃಹತ್ ಗಾತ್ರವನ್ನು ಹೊಂದಿದೆ. ಇದು 140 ಸೆಂ.ಮೀ ಉದ್ದ 90 ಸೆಂ.ಮೀ ಅಗಲ ಹಾಗೂ 40 ಸೆಂ.ಮೀ ದಪ್ಪವಾಗಿವೆ. ಇವುಗಳಲ್ಲಿ ಆನೆ, ಗೋವು ಮತ್ತು ಹಂಸಗಳ ಕೆತ್ತನೆಗಳನ್ನು ಕಾಣಬಹುದು. ಎರಡು ಗೋಸಾಸ ಕಲ್ಲುಗಳಲ್ಲಿ ಒಂದೊಂದು ಶಬ್ದಗಳು ಕೆತ್ತಲ್ಪಟೈವೆ. “ಸ್ವಸ್ತಿಶ್ರೀ ಚಡಪುಲಿ ” ಮತ್ತು “ಮೊಕಮ್ಳಲ್ದ” ಎಂಬ ಶಬ್ದಗಳು ಗೋವುಗಳನ್ನು ದಾನ ನೀಡಿದ ವ್ಯಕ್ತಿಗಳ ಹೆಸರುಗಳಾಗಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ

ಶಿಕಾರಿಪುರ ತಾಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ಸಂಖ್ಯೆಯ ಗೋಸಾಸ ಕಲ್ಲುಗಳನ್ನು ಶೋಧಿಸಲಾಗಿದೆ. ಮುತ್ತಳ್ಳಿಯೊಂದರಲ್ಲೇ 30 ಗೋಸಾಸಕಲ್ಲುಗಳಿವೆ. ಇವುಗಳ ಜತೆ ಕರ್ನಲ್ಲಿ ಗ್ರಾಮದಲ್ಲಿ 9ನೇ ಶತಮಾನಕ್ಕೆ ಸೇರಿದ ಕೋಣನ ತಲೆ ಶಿಲ್ಪ ಮತ್ತು ಗಜಲಕ್ಷ್ಮಿ ಫಲಕಗಳನ್ನೂ ಗುರುತಿಸಲಾಗಿದೆ. ಲಿಪಿ ತಜ್ಞರಾದ ಪಾಡಿಗರ್, ಜಗದೀಶ್ ಶಿವಮೊಗ್ಗ ಮಾರ್ಗದರ್ಶನದಲ್ಲಿ ಇತಿಹಾಸ ತಜ್ಞರ, ಶಿಕ್ಷಕ ರಮೇಶ್ ಹಿರೇಜಂಬೂರ ಇದರ ಸಂಶೋಧನೆ ನಡೆಸಿದ್ದಾರೆ. ಕರ್ನಲ್ಲಿ ಗ್ರಾಮದ ಹರೀಶ್ ಎಂಬುವವರ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಅದೇ ಗ್ರಾಮದ ಕೋಟೆಪ್ಪ, ಮಂಜಪ್ಪ ಚುರ್ಚಿಗುಂಡಿ ಸಹಕಾರ ನೀಡಿದ್ದರು.

ಗೋಸಾಸ ಕಲ್ಲುಗಳು ಎಂದರೇನು?

ಗೋಸಾಸ ಕಲ್ಲುಗಳು ಗೋದಾನಕ್ಕೆ ಸಂಬಂಧಿಸಿದ ಶಾಸನಗಳಾಗಿದ್ದು, ಕನ್ನಡ ಶಾಸನಗಳಲ್ಲಿಯೇ ವಿಶಿಷ್ಟವೆನಿಸಿವೆ. ”ಗೋಸಹಸ್ರ” ಸಂಸ್ಕೃತ ಪದದ ತದ್ಭವ “ಗೋಸಾಸ” ವಾಗಿದೆ. ಸಾವಿರ ಗೋವುಗಳ ದಾನ ಗೋಸಾಸವೆನಿಸಿದೆ. ಷೋಡಶ ದಾನಗಳಲ್ಲಿ ಇದೂ ಒಂದು. ಯಾರಾದರೂ ಗೋವುಗಳನ್ನು (ಗೋಸಾಸ) ದಾನ ಮಾಡುವಾಗ ಕೆಲವು ವಿಧಿ ವಿಧಾನಗಳನ್ನು ಅನುಸರಿಸಬೇಕಿತ್ತು. “ದಾನಿ ಒಂದು ದಿನ ಇಲ್ಲವೆ ಮೂರು ದಿನ ಕೇವಲ ಹಾಲನ್ನು ಮಾತ್ರ ಸೇವಿಸಬೇಕು. ಬಳಿಕ ಲೋಕಪಾಲನ್ನು ಸ್ತುತಿಸಿ ಪುಣ್ಯಾಹವಾಚನ ಹೋಮ ಮಾಡಬೇಕು. ಒಂದು ಎತ್ತಿನ ದೇಹಕ್ಕೆ ಗಂಧವನ್ನು ಲೇಪಿಸಿ ಅದನ್ನು ವೇದಿಕೆಯ ಮುಂದೆ ನಿಲ್ಲಿಸಬೇಕು. ಸಾವಿರ ಗೋವುಗಳನ್ನು ಒಂದೆಡೆಗೆ ಸಂಗ್ರಹಿಸಿ ಅವುಗಳಲ್ಲಿ 10 ಅನ್ನು ಆಯ್ದುಕೊಳ್ಳಬೇಕು. ಜೂಲು ಹೊದಿಸಲ್ಪಟ್ಟ ಈ ಹತ್ತು ಗೋವುಗಳನ್ನು ಮಂಟಪದೊಳಗೆ ಕರೆತರಬೇಕು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿದೆ!

ಈ ಹತ್ತು ಆಕಳುಗಳ ನಡುವೆ ಬಂಗಾರದ ಕೊರಳ ಗೆಜ್ಜೆ ಮತ್ತು ರೇಷ್ಮೆ ಜೂಲುಗಳಿಂದ ಅಲಂಕರಿಸಲ್ಪಟ್ಟ ಬಂಗಾರದ ನಂದಿ ವಿಗ್ರಹವನ್ನು ನಿಲ್ಲಿಸಬೇಕು. ದಾನಿಯು ಸರ್ವೌಷದ ಸ್ನಾನಮಾಡಿದ ಬಳಿಕ, ಮುಗಿದ ಕೈಗಳಲ್ಲಿ ಹೂವುಗಳನ್ನು ಹಿಡಿದು ಗೋಸ್ತುತಿ , ಮಂತ್ರ ಪಠಣ ಮಾಡಬೇಕು. ಬಂಗಾರದ ನಂದಿ ಸಹಿತ ಎರಡು ಆಕಳುಗಳನ್ನು ಗುರುವಿಗೆ ನೀಡಬೇಕು. ಮಿಕ್ಕ 8 ಆಕಳುಗಳನ್ನು 8 ಜನ ಪುರೋಹಿತರಿಗೆ ನೀಡಬೇಕು. ಉಳಿದಿರುವ 990 ಆಕಳುಗಳಲ್ಲಿ 5 ಇಲ್ಲವೆ 10 ಆಕಳುಗಳನ್ನ ಬ್ರಾಹ್ಮಣರಿಗೆ ಕೊಡಬೇಕು. ಹಾಲು ಸೇವಿಸುವುದರ ಮೂಲಕ ದಾನಿಯ ಈ ಸಮಾರಂಭವನ್ನು ಮುಕ್ತಾಯಗೊಳಿಸಿದಾಗ ಇದರ ಗುರುತಿಗೆ “ಒಂದು ಗೋಸಾಸ” ಕಲ್ಲನ್ನು ನೆಡಲಾಗುತ್ತಿತ್ತು.

Exit mobile version