ಗಂಗಾವತಿ (ಕೊಪ್ಪಳ): ಮಾಧ್ವ ಸಂಪ್ರದಾಯದ ಪ್ರಮುಖ ಧಾರ್ಮಿಕ ತಾಣವಾದ ಗಂಗಾವತಿ (Gangavathi News) ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿನ ವಿವಾದಿತ ಜಯತೀರ್ಥ-ರಘುವರ್ಯರ ವೃಂದಾವನದ ಪೂಜೆಯ ಸಂಬಂಧ ಈ ಹಿಂದೆ ಧಾರವಾಡದ ಏಕಸದಸ್ಯ ಪೀಠವು ನೀಡಿದ್ದ ಪೂಜೆಯ ನಿರ್ಬಂಧದ ತೀರ್ಪನ್ನು ದ್ವಿ ಸದಸ್ಯ ಪೀಠ ತಳ್ಳಿ ಹಾಕಿದೆ. ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳಿಗೆ ಈ ಮೊದಲಿನಂತೆ, ಜಯತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುವ ಅವಕಾಶ ದೊರೆತಂತಾಗಿದೆ.
ಧಾರವಾಡದ ಹೈಕೋರ್ಟ್‌ನ ಆದೇಶ ಹೊರ ಬೀಳುತ್ತಿದ್ದಂತೆಯೆ ಸಂಭ್ರಮಿಸಿದ ಅನುಯಾಯಿಗಳು, ಆನೆಗೊಂದಿ ರಾಯರಮಠದ ಅರ್ಚಕರ ನೇತೃತ್ವದಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ನವವೃಂದಾವನ ಗಡ್ಡೆಗೆ ತೆರಳಿ ಜಯತೀರ್ಥರ ವೃಂದಾವನಕ್ಕೆ ಶೇಷವಸ್ತ್ರ ಅಲಂಕಾರ ಮಾಡಿ, ವಿಶೇಷ ಪೂಜೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ | Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್
ಏನಿದು ವಿವಾದ?
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮಾಧ್ವ ಮತ ಪ್ರಚಾರಕರ ಒಂಭತ್ತು ಯತಿಗಳ ಭೌತಿಕ ಸಮಾಧಿಗಳಿವೆ. ಈ ಪೈಕಿ ಒಂದು ಸಮಾಧಿ (ವೃಂದಾವನ) ವಿವಾದದ ಕೇಂದ್ರ ಬಿಂದುವಾಗಿದೆ.
ರಾಯರಮಠದ ಅನುಯಾಯಿಗಳು ಅದನ್ನು ಜಯತೀರ್ಥರದ್ದು ಎಂದು, ಉತ್ತರಾಧಿ ಮಠದ ಅನುಯಾಯಿಗಳು ಅದೇ ವೃಂದಾವನವನ್ನು ರಘುವರ್ಯ ತೀರ್ಥರದ್ದು ಎಂದು ವಾದಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು, ಕಾನೂನು ತೊಡಕಾಗಿ ಪರಿಣಾಮಿಸಿದೆ.
ನ್ಯಾಯಾಲಯದಲ್ಲಿ ಪ್ರಕರಣ
ರಘುವರ್ಯ ತೀರ್ಥರ ವೃಂದಾವನವನ್ನು ರಾಯರಮಠದವರು, ಜಯತೀರ್ಥರದ್ದು ಎಂದು ವಾದಿಸುತ್ತಿದ್ದು ಮತ್ತು ಅದಕ್ಕೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಯತಿ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ. ಇದಕ್ಕೆ ತಡೆ ನೀಡುವಂತೆ ಕೋರಿ ಈ ಸಂಬಂಧ ಉತ್ತರಾಧಿ ಮಠದ ಅನುಯಾಯಿಗಳು ಧಾರವಾಡದ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಮನವಿ ಪುರಸ್ಕರಿಸಿದ್ದ ಧಾರವಾಡದ ಹೈಕೋರ್ಟ್ ಶಂಕರ್ ಮುಗುದುಮ್ ಅವರಿದ್ದ ಏಕಸದಸ್ಯ ಪೀಠ, ವಿವಾದಿತ ವೃಂದಾವನಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡದಂತೆ ರಾಯರ ಮಠದ ಅನುಯಾಯಿಗಳಿಗೆ ನಿಬಂರ್ಧ ಹೇರಿ ಸೆ.11ರಂದು ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ರಾಯರಮಠದ ಪರವಾಗಿ ವಕೀಲರಾದ ಪ್ರಭುಲಿಂಗ ನಾವದಗಿ ಮತ್ತು ಶಿವಪ್ರಸಾದ ಶಾಂತನಗೌಡ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ ಧಾರವಾಡದ ಹೈಕೋರ್ಟ್‌ನ ನ್ಯಾಯಾಧೀಶರಾದ ಕೃಷ್ಣಕುಮಾರ್ ಹಾಗೂ ಬಸವರಾಜ್ ಅವರಿದ್ದ ದ್ವಿ ಸದಸ್ಯ ನ್ಯಾಯಪೀಠವು, ಈ ಹಿಂದೆ ಮಾಡಿದ್ದ ಆದೇಶವನ್ನು ತಳ್ಳಿ ಹಾಕಿದೆ.
ಇದನ್ನೂ ಓದಿ | Vinay Kulkarni: ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ಮತ್ತೆ ಅನುಮತಿ ನಿರಾಕರಿಸಿದ ಹೈಕೋರ್ಟ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನೆಗೊಂದಿ ರಾಯರಮಠದ ವ್ಯವಸ್ಥಾಪಕ ಈಡಪನೂರು ಸುಮಂತ ಕುಲಕರ್ಣಿ ಅವರು, ನ್ಯಾಯಪೀಠದ ಆದೇಶದಿಂದಾಗಿ ಸತ್ಯಕ್ಕೆ ಜಯ ಸಂಧಂತಾಗಿದೆ. ಜಯತೀರ್ಥರ ಮೂಲಕ ವೃಂದಾವನ ಆನೆಗೊಂದಿಯಲ್ಲಿಯೇ ಇದೆ ಎಂಬುವುದಕ್ಕೆ ಸಾಕ್ಷಿ ಸಿಕ್ಕಂತಾಗಿದ್ದು, ದೈನಿಕ ಧಾರ್ಮಿಕ ಕಾರ್ಯ ನಡೆಯುತ್ತವೆ ಎಂದಿದ್ದಾರೆ.