ಬೆಂಗಳೂರು: ಕಳೆದ ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆಗಿಳಿದಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು (Anganawadi Workers) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಪೊಲೀಸರಿಗೂ ಹಾಗೂ ಸರ್ಕಾರದ ಈ ಬೆದರಿಕೆಗೆ ಹೆದರುವುದಿಲ್ಲ. ಮತ್ತೆ ಮತ್ತೆ ಬರುತ್ತಲೇ ಇರುತ್ತೇವೆ ಎಂದು ಕಾರ್ಯಕರ್ತೆಯರು ಎಚ್ಚರಿಕೆ ನೀಡಿ ಧಿಕ್ಕಾರ ಕೂಗಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದಿದ್ದು, ಕೊರೆವ ಚಳಿಯನ್ನು ಲೆಕ್ಕಿಸದೆ ಮಕ್ಕಳ ಸಮೇತ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತರು ಜಮಾಯಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಕಾಯಂ ಮಾಡಬೇಕು. ಜತೆಗೆ ರಾಷ್ಟ್ರೀಯ ಶಿಕ್ಷಣ ಯೋಜನೆಯಾದ NEP ಅನ್ನು ರಾಜ್ಯದಲ್ಲಿ ಜಾರಿ ಮಾಡಿದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 31 ಸಾವಿರ ವೇತನ ನೀಡಿ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ತಕ್ಷಣ ಮೇಲ್ದರ್ಜೆಗೆ ಏರಿಸಬೇಕು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಿ ಪೆನ್‌ಷನ್ ಜಾರಿ ಮಾಡಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರೋಗ್ಯ ವಿಮೆಯಾದ ಇ.ಎಸ್.ಐ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಭರವಸೆ ಈಡೇರಿಸಿ ಇಲ್ಲದಿದ್ದರೆ ಚಾಮುಂಡಿ ರೂಪ
ಸರ್ಕಾರದವರು ಬೇಡಿಕೆ ಈಡೇರಿಕೆಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಒಳಿತು ಶಾಂತಿ ರೂಪದಲ್ಲಿ ಎಲ್ಲರೂ ವಾಪಸ್ ಆಗುತ್ತೇವೆ, ಇಲ್ಲವಾದರೆ ಚಾಮುಂಡಿ ರೂಪ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಇದ್ದು, ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಅಂಗನವಾಡಿ ಕಾರ್ಯಕರ್ತೆಯರು ಉಗ್ರ ರೂಪತಾಳುತ್ತೇವೆ.
ಪ್ರತಿಭಟನೆ ಆರಂಭದ ವೇಳೆ ಸರ್ಕಾರದ ಪ್ರತಿನಿಧಿಗಳು ಪೊಲೀಸರ ಮೂಲಕ ರಾಜಿಗೆ ಕಳುಹಿಸುತ್ತಾರೆ. ಕಳೆದ ಮೂರು ಬಾರಿ ಪ್ರತಿಭಟನೆ ಮಾಡಿದಾಗಲೂ ಇದೆ ರೀತಿ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಸಿಲ್ಲ. ಈಗ ಮತ್ತೆ ಪೊಲೀಸರ ಮುಖಂತರ ರಾಜಿ ಮಾಡಲು ಕಳುಹಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ | Murder threat : ವಿದೇಶದಲ್ಲಿರುವ ಯುವಕ ಕಳುಹಿಸಿದ ಹಣಕ್ಕಾಗಿ ಸೋದರರ ಅಪಹರಣ, ಒಬ್ಬನ ಬಿಡುಗಡೆ