Site icon Vistara News

Anganawadi Workers: ಸಚಿವ ಹಾಲಪ್ಪ ಆಚಾರ್ ಸಂಧಾನ ಯಶಸ್ವಿ; ಪ್ರತಿಭಟನೆ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

Anganwadi Workers

#image_title

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟ, ಸಚಿವ ಹಾಲಪ್ಪ ಆಚಾರ್ ಅವರ ಸಂಧಾನದ ಫಲವಾಗಿ ಬುಧವಾರ ಅಂತ್ಯಗೊಂಡಿದೆ. ಬಹುತೇಕ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ (Anganawadi Workers) ಅಂತ್ಯವಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಹಾಲಪ್ಪ ಆಚಾರ್‌ ಅವರು ಭರವಸೆ ನೀಡಿದ ತಕ್ಷಣ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂತಸದಿಂದ ಕುಣಿದಾಡಿ ಸಂಭ್ರಮಾಚರಣೆ ನಡೆಸಿ, ತಮ್ಮ ಊರುಗಳತ್ತ ಪಯಣ ಬೆಳೆಸಿದರು.

ಈ ವೇಳೆ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ಅಂಗನವಾಡಿ ಕಾರ್ಯಕರ್ತೆಯರ ಬಹುತೇಕ ಬೇಡಿಕೆಗಳನ್ನು ಈಡೇರಿಕೆ ಮಾಡಲು ಒಪ್ಪಿಗೆ ಕೊಟ್ಟಿದ್ದೇವೆ. 10 ರಿಂದ 1 ಗಂಟೆವರೆಗೆ ಕಾರ್ಯಕರ್ತೆಯರನ್ನು ಇತರೆ ಯಾವುದೇ ಕೆಲಸಕ್ಕೆ ನಿಯೋಜನೆ ಮಾಡುವ ಹಾಗಿಲ್ಲ ಎಂಬ ಬೇಡಿಕೆ ಒಪ್ಪಿದ್ದೇವೆ. ಸಿಎಂ ಕೂಡ ಗ್ರಾಚ್ಯುವಿಟಿ ನೀಡಲು ಸಹಮತ ಸೂಚಿಸಿದ್ದಾರೆ. ಎಲ್ಲವನ್ನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಒಪ್ಪಿದ್ದಾರೆ. ಇಂದು ರಾತ್ರಿ ಮತ್ತೆ ಗ್ರಾಚ್ಯುವಿಟಿ ವಿಚಾರವಾಗಿ ಸಭೆ ಮಾಡಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Hadapada Reservation: ಹಡಪದ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಮನವಿ

ಅಂಗನವಾಡಿ ಕಾರ್ಯಕರ್ತೆಯರ ಸಿಐಟಿಯು ಸಂಘದ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ನಮ್ಮ ಎಲ್ಲಾ ಬೇಡಿಕೆಗಳೂ ಹೆಚ್ಚು ಕಡಿಮೆ ಈಡೇರಿವೆ. 45 ವರ್ಷದ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ನಾಳೆ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ. ನಮ್ಮ ಹೋರಾಟಕ್ಕೆ ಸಿಕ್ಕ ಅತಿ ದೊಡ್ಡ ಜಯ ಇದಾಗಿದೆ. ಅಂಗನವಾಡಿ ಮಕ್ಕಳಿಗೆ ದೃಢೀಕರಣ ಪತ್ರ ಕೊಡಲು ಸರ್ಕಾರ ಒಪ್ಪಿದೆ. ಹೆಚ್ಚುವರಿ ಕೆಲಸದ ಬಗ್ಗೆ ನಾಲ್ಕು ತಿಂಗಳ ಅವಧಿ ಕೇಳಿದ್ದಾರೆ. ಕೇಂದ್ರ ಚುನಾವಣೆ ಆಯೋಗದ ಜತೆ ಮಾತನಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಅಂಗನವಾಡಿ ಕೇಂದ್ರದ ಮೂಲಕ ಅನೌಪಚಾರಿಕ ಶಿಕ್ಷಣ ಕೊಡಲು ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.

ಸಿಐಟಿಯು, ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು ಇದಾಗಿತ್ತು

  1. ಗ್ರಾಚ್ಯುವಿಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು.
  2. ಅನ್ನದಾಸೋಹ ಜತೆಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠಪಡಿಸಬೇಕು
  3. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು.
  4. ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂಬ ಪದನಾಮದಿಂದ ಕರೆಯಬೇಕು.
  5. ಅಂಗನವಾಡಿ ನೌಕರರ ಮೇಲೆ ಹೆಚ್ಚುತ್ತಿರುವ ಶಿಸ್ತುಕ್ರಮಕ್ಕೆ ಕಡಿವಾಣ ಹಾಕಬೇಕು
  6. ಉಚಿತ ಕೆಲಸ ನಿಲ್ಲಿಸಿ, ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು
  7. ನ್ಯಾಯಯುತ ಮುಂಬಡ್ತಿಗಳನ್ನು ಕೊಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು
  8. ದಿನನಿತ್ಯದ ಸಮಸ್ಯೆಗಳಿಗೆ ಇಲಾಖಾಧಿಕಾರಿಗಳು ಸ್ಪಂದಿಸುವ ವಿಧಾನ ಕುಂಠಿತವಾಗುತ್ತಿದ್ದು, ಕ್ರಮವಹಿಸಬೇಕು
  9. ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು ಅನುದಾನವನ್ನು ಹೆಚ್ಚಿಸಬೇಕು
Exit mobile version