ಬೆಂಗಳೂರು: ಕಾಂಗ್ರೆಸ್‌ಗೆ ತನ್ನ ಗ್ಯಾರಂಟಿ ಯೋಜನೆಯೇ ತಲೆನೋವಾಗಿ ಪರಿಣಮಿಸಿದೆ. 5 ಗ್ಯಾರಂಟಿಗಳ (Congress guarantee) ಜಾರಿಗೆ ಕಾಂಗ್ರೆಸ್ ಸರ್ಕಾರ ಹರಸಾಹಸ ಪಡುತ್ತಿದ್ದರೆ, ಈ ಮಧ್ಯೆ ಸರ್ಕಾರಕ್ಕೆ ಮತ್ತೆ ಸಂಕಷ್ಟವೊಂದು ಎದುರಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು (Anganawadi workers) ಒತ್ತಾಯಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಹೊರಡಿಸಿತ್ತು. ಈ ಬಗ್ಗೆ ಶೀಘ್ರ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಜೂನ್ 27ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ.
ಈಗಾಗಲೇ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರ ಫೆಡರೇಶನ್ (AITUC) ಪ್ರತಿಭಟನೆಗೆ ಕರೆ ಕೊಟ್ಟಿದೆ. ಜೂನ್ 27ರೊಳಗೆ ಬೇಡಿಕೆ ಈಡೇರದಿದ್ದರೆ, ಸರ್ಕಾರ ಸ್ಪಂದಿಸದೇ ಹೋದರೆ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಬೇಡಿಕೆಗಳೇನು?
-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನವನ್ನು ಕ್ರಮವಾಗಿ 15 ಸಾವಿರ ಮತ್ತು 10 ಸಾವಿರ ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಗಿದೆ. ಅದನ್ನು ಅನುಷ್ಠಾನಗೊಳಿಸಬೇಕು.
-ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 4 ವರ್ಷದ ಹಿಂದೆ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು ಹಾಳಾಗಿವೆ. ಆದ್ದರಿಂದ ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್ ನೀಡಬೇಕು.
-ಪ್ರಣಾಳಿಕೆಯ ಭಾಗವಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಂಚಣಿ ಸೌಕರ್ಯವಿಲ್ಲ. ಹಾಗಾಗಿ ಅವರು ಸೇವಾ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ, ₹3 ಲಕ್ಷ ಹಾಗೂ ಕಿರಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ₹2 ಲಕ್ಷ ನೀಡುವುದು.
-ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೂ ಸಹಕರಿಸುವಂತೆ ಒತ್ತಡ ಹೇರಲಾಗುತ್ತಿದ್ದು, ಈ ಕ್ರಮವನ್ನು ಕೈಬಿಡಬೇಕು.
ಇದನ್ನೂ ಓದಿ: Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜಯಮ್ಮ ಮಾತನಾಡಿದ್ದು, ಜೂನ್ 27ರಂದು ಫ್ರೀಡಂ ಪಾರ್ಕ್‌ನಲ್ಲಿ ನಾವು ಪ್ರತಿಭಟನೆ ಮಾಡುವುದು ಶತಸಿದ್ಧವಾಗಿದೆ. 6ನೆೇ ಗ್ಯಾರಂಟಿ ಆದ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಬಗ್ಗೆ ಸರ್ಕಾರ ಗಮನ ಹರಿಸಬೇಕು.
ಬಿಸಿಯೂಟ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. 15 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ 10 ಸಾವಿರಾರು ಗೌರವ ಧನ ಹೆಚ್ಚಳ ಮಾಡುತ್ತೇವೆ ಎಂದಿದ್ದಾರೆ. ನಾವು ಜೀವನ ಮಾಡುವುದು ಈಗಿನ ದಿನಗಳಲ್ಲಿ ಕಷ್ಟ ಆಗುತ್ತಿದೆ. ಬೇರೆ ಎಲ್ಲಾ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರ ಮಾತನಾಡುತ್ತಿದ್ದು, ನಮ್ಮ ಬೇಡಿಕೆ ಬಗ್ಗೆ ಚಕಾರ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ