ಬೆಂಗಳೂರು: ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಹಾಗೂ ಸಹಾಯಕಿಯರನ್ನು ಆಯ್ಕೆ ಮಾಡಲು ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿತ್ತು. ಎನ್‌ಇಪಿ ಪ್ರಕಾರ ಕಾರ್ಯಕರ್ತೆಯರು ಹಾಗೂ ಸಹಾಯಕರ ಆಯ್ಕೆಗೆ ಮಾನದಂಡವನ್ನು ವಿಧಿಸಿತ್ತು. ಇದೀಗ ಈ ಮಾನದಂಡದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ತಿರುಗಿ ಬಿದ್ದಿದ್ದಾರೆ.
ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಂಗನವಾಡಿ ನೇಮಕಾತಿಗೆ ಮಾನದಂಡ ಬದಲಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಹಿಂದೆಲ್ಲ ಎಸ್‌ಎಸ್‌ಎಲ್‌ಸಿ ಪಾಸ್ ಆದರೆ ಕಾರ್ಯಕರ್ತೆಯರನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಪಿಯುಸಿ ಅಥವಾ ಟೀಚರ್ ಟ್ರೈನಿಂಗ್ ಆದವರಿಗೆ ಅವಕಾಶವನ್ನು ಕೊಟ್ಟಿರುವುದಕ್ಕೆ ಸ್ವಾಗತ ಇದೆ.
ಆದರೆ ಸಹಾಯಕಿಯರಿಗೆ ಎಸ್‌ಎಸ್‌ಎಲ್‌ಸಿ ಕಡ್ಡಾಯ ಮಾಡಿರುವ ನಿಯಮ ಸರಿಯಲ್ಲ. ಬಿಬಿಎಂಪಿ ಹಾಗೂ ರಾಜ್ಯದ ಎಲ್ಲ ನಗರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಸಹಾಯಕಿಯರು ಸಿಗುವುದು ಕಷ್ಟವಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಫೇಲ್ ಆದವರಿಗೂ ಆಯ್ಕೆಯ ಅವಕಾಶ ಕೊಡಬೇಕು. ಮೂರು ವರ್ಷದಿಂದ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಆಗಿದೆ. ಇದರಿಂದಾಗಿ ಕಷ್ಟದಲ್ಲಿ ಕೆಲಸ ಮಾಡುವಂತಾಗಿದೆ. ಮುಂಬಡ್ತಿಗೂ ಪಿಯುಸಿ ಕಡ್ಡಾಯ ಮಾಡಿರುವುದು ಸರಿಯಲ್ಲ, ಸರ್ಕಾರ ಈ ಆದೇಶವನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಏನಿದು ಸರ್ಕಾರದ ಆದೇಶ?
ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆಯನ್ನು ಇನ್ನು ಮುಂದೆ ಆನ್‌ಲೈನ್ ಮುಖಾಂತರವೇ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆಯನ್ನು ಕಡ್ಡಾಯ ಮಾಡಿದ್ದು, ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ D.SE.R.T.ಯಿಂದ ECCE ಡಿಪ್ಲೊಮಾ ಕೋರ್ಸ್, JOC ಕೋರ್ಸ್, N.T.T. ಕೋರ್ಸ್‌ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷನ್, ಹೋಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಒಂದು ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಸಹಾಯಕಿಯರಿಗೆ ಇರಬೇಕು ಕನಿಷ್ಠ ವಿದ್ಯಾರ್ಹತೆ
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ/ಮುಕ್ತ ವಿದ್ಯಾಲಯಗಳಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗೆಡೆ ಹೊಂದಿರಬೇಕು. ಮಾರ್ಕ್ಸ್ ಕಾರ್ಡ್‌ನಲ್ಲಿ ಗರಿಷ್ಠ 625 ಕನಿಷ್ಠ 219 ಅಂಕಗಳನ್ನು ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ಒಂದು ವೇಳೆ ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದರೆ, ಕನ್ನಡವನ್ನು ಪ್ರಥಮ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗೆ ಆ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಠ ಹಾಗೂ ಕನಿಷ್ಠ ಅಂಕಗಳು ಹಾಗೂ ಕರ್ನಾಟಕ ರಾಜ್ಯದಲ್ಲಿ ನಿಗದಿಪಡಿಸಿದ ಅಂಕದಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ | Karnataka Election : ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ