Site icon Vistara News

Anganawadi Workers: ಅಂಗನವಾಡಿ ಸಿಬ್ಬಂದಿಗೆ ಷರತ್ತುಬದ್ಧ 15 ದಿನಗಳ ಬೇಸಿಗೆ ರಜೆಗೆ ಅಸ್ತು

೨೦.೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ

ಬೆಂಗಳೂರು: ರಾಜ್ಯದ ಅಂಗನವಾಡಿ (Anganawadi Workers) ನೌಕರರಿಗೆ ಷರತ್ತು ಬದ್ಧ 15 ದಿನಗಳ ಬೇಸಿಗೆ ರಜೆಗೆ (Summer Holidays) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಸ್ತು ಎಂದಿದೆ. ಮೇ 15ರಿಂದ 29ರವರೆಗೆ ಒಟ್ಟು 15 ದಿನಗಳ ಬೇಸಿಗೆ ರಜೆಯನ್ನು ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಮಂಜೂರು ಮಾಡಿ ಆದೇಶಿಸಿದೆ.

2023-24ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬೇಸಿಗೆ ರಜೆಯನ್ನು ಮಂಜೂರು ಮಾಡುವಂತೆ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಒತ್ತಾಯಿಸಿತ್ತು. ಅಂಗನವಾಡಿ ಕಾರ್ಯಕರ್ತರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.

ರಜೆ ಅವಧಿಯಲ್ಲಿ ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಚುಚ್ಚುಮದ್ದು/ ಆರೋಗ್ಯ ತಪಾಸಣೆ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕರೆತರುವುದು. ಜತೆಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳನ್ನು ವಹಿಸಿದ್ದಲ್ಲಿ ಚುನಾವಣಾ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.

ಇನ್ನು ಈ ಹಿಂದೆ ಅಂಗನವಾಡಿ ಕೇಂದ್ರಗಳಿಗೆ ಬೇಸಿಗೆ ರಜೆಯನ್ನು ಮೇ ತಿಂಗಳ ಬದಲಾಗಿ ಏಪ್ರಿಲ್‌ನಲ್ಲೇ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಏಪ್ರಿಲ್‌ನಲ್ಲಿ ಪೂರಕ ಪೌಷ್ಟಿಕ ಆಹಾರದ ವಿತರಣೆ ಪ್ರಾರಂಭಿಸಿದ್ದರಿಂದ ಬೇಸಿಗೆ ರಜೆಯನ್ನು ನೀಡುವುದು ಕಷ್ಟ ಎಂದು ಇಲಾಖೆ ರಜೆಯನ್ನು ಮುಂದೂಡಿತ್ತು.

ಇದನ್ನೂ ಓದಿ: Weather Report: ಇಂದೂ ಬರಲಿದೆ ಬಿರುಗಾಳಿ ಮಳೆ; ಯಾವ ಜಿಲ್ಲೆಗಳಿಗೆ ಸಂಕಷ್ಟ?

ಬಳಿಕ ಮೇ 2 ರಿಂದ 16ರ ವರೆಗೆ ಬೇಸಿಗೆ ರಜೆ ನೀಡಲು ಯೋಜಿಸಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರಜೆಯನ್ನು ಮುಂದೂಡಲಾಗಿತ್ತು. ಇದೀಗ ಚುನಾವಣಾ ಪ್ರಕ್ರಿಯೆ ಎಲ್ಲವೂ ಮೇ 13ಕ್ಕೆ ಮುಗಿಯಲಿದ್ದು, ಹೀಗಾಗಿ ಮೇ 15ರಿಂದ ಬೇಸಿಗೆ ರಜೆಯನ್ನು ಮಂಜೂರು ಮಾಡಲಾಗಿದೆ. ರಜೆಯ ಆದೇಶ ಬರದಿದ್ದರೆ “ನಮ್ಮ ರಜೆಯನ್ನು ನಾವು ಪಡೆಯುತ್ತೇವೆ” ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು.

Exit mobile version