ಗದಗ: ರಾಜ್ಯದ ಏಕೈಕ ಕಿರು ಮೃಗಾಲಯ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿರುವ ಗದಗನ ಬಿಂಕದಕಟ್ಟಿ ಮೃಗಾಲಯಕ್ಕೆ (Gadaga zoo) ಮತ್ತೆರಡು ಜೋಡಿ ಸಿಂಹಗಳು ಎಂಟ್ರಿ ಕೊಟ್ಟಿವೆ.
1972ರಲ್ಲಿ ಪ್ರಾರಂಭವಾದ ಬಿಂಕದಕಟ್ಟಿ ಕಿರು ಮೃಗಾಲಯ ಪ್ರಸ್ತುತ ವರ್ಷ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ, ನವ ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗದಗ ಮೃಗಾಲಯದಿಂದ ಕಪಿಲ ಅನ್ನೋ ಹೆಸರಿನ ಗಂಡು ಮತ್ತು ಮೈಸೂರು ಮೃಗಾಲಯದಿಂದ ಕಸ್ತೂರಿ ಅನ್ನೋ ಹೆಸರಿನ ಹೆಣ್ಣು ತೋಳಗಳನ್ನು ಮಧ್ಯಪ್ರದೇಶದ ಇಂದೋರ್‌ನ ಕಮಲಾ ಪ್ರಾಣಿ ಸಂಗ್ರಹಾಲಯಕ್ಕೆ ಹಸ್ತಾಂತರಿಸಿ, ಅಲ್ಲಿಂದ 3 ವರ್ಷದ ಶಿವ (ಗಂಡು) ಮತ್ತು 2 ವರ್ಷದ ಗಂಗಾ (ಹೆಣ್ಣು) ಎಂಬ ಹೆಸರಿನ ಎರಡು ಮರಿ ಸಿಂಹಗಳನ್ನು ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿದೆ.
ಡಿಸೆಂಬರ್ 8ರಂದು ಬೆಳಗ್ಗೆ 10.00 ಗಂಟೆಗೆ ಕಾಡಿನ ಮರಿ ರಾಜಾ, ಮರಿ ರಾಣಿ ಗರ್ಜಿಸೋದಕ್ಕೆ ಆಗಮಿಸುತ್ತಿದ್ದು, ಗದಗ ಶಾಸಕ ಎಚ್.ಕೆ.ಪಾಟೀಲ್ ಸಿಂಹಗಳನ್ನು ಸ್ವಾಗತಿಸಲಿದ್ದಾರೆ.
ಕಳೆದ ವರ್ಷವಷ್ಟೆ ರಾಷ್ಟ್ರೀಯ ಸಿಂಹ ದಿನದ ಅಂಗವಾಗಿ 2021ರ ಮಾರ್ಚ್ 18ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಗದಗ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ 11 ವರ್ಷದ ಧರ್ಮ ಹಾಗೂ ಅರ್ಜುನ ಎಂಬ ಎರಡು ಗಂಡು ಸಿಂಹಗಳನ್ನು ತರಲಾಗಿತ್ತು. ಇದೀಗ ಮತ್ತೆರಡು ಜೋಡಿ ಸಿಂಹಗಳನ್ನು ಕರೆತರಲಾಗುತ್ತಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮೃಗಾಲಯದಲ್ಲಿ ಕೈಗೊಳ್ಳಲಾಗಿದೆ. ಮತ್ತೆರಡು ಮರಿ ಸಿಂಹಗಳ ಆಗಮನದಿಂದ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಇದನ್ನೂ ಓದಿ | ʼರಾಕಿʼಗೆ ಮೂರು ಮಕ್ಕಳು: Mysuru Zooನಲ್ಲಿ 9 ವರ್ಷದ ಬಳಿಕ ಬಿಳಿ ಹುಲಿಮರಿಗಳ ಜನನ