ಬೆಂಗಳೂರು: ಪರಿಷ್ಕೃತ ಪಠ್ಯ ಹಿಂಪಡೆಯಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕುವೆಂಪು ಬಗ್ಗೆ ನಾಲಾಯಕ್ ಮನುಷ್ಯರು ಮಾತನಾಡಬಾರದು. ನಾಡಗೀತೆಗೆ ಅವಮಾನ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ ಇದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆಂಜನಪ್ಪ ಹೇಳಿದರು.
ನಗರದ ರಾಜ್ಯ ರಾಜ್ಯ ಒಕ್ಕಲಿಗರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಕುವೆಂಪು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ಸರ್ಕಾರ ರೋಹಿತ್ ಚಕ್ರತೀರ್ಥ ಅಂತಹವರಿಗೆ ಅಧಿಕಾರ ನೀಡಿದ್ದು ತಪ್ಪು ನಿರ್ಧಾರ ಎಂದು ಟೀಕಿಸಿದರು.
ಸಂಘದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆಂಜನಪ್ಪ, ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಒಕ್ಕಲಿಗ ಸಂಘದ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ ಮಾಡಿರಲಿಲ್ಲ. ಹೀಗಾಗಿ ಜೂನ್ 27ರಂದು ಈ ವರ್ಷ ಅದ್ದೂರಿಯಾಗಿ 513ನೇ ಕೆಂಪೆಗೌಡ ಜಯಂತಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಮಾತನಾಡಿ, ಸಂಘದಿಂದ ಹಲವು ಬದಲಾವಣೆ ಆಗಿದೆ, ನಮ್ಮ ತಂಡ ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ, ಕಿಮ್ಸ್ ಕಾಲೇಜಿನ ಡರ್ಮಟಾಲಜಿ ವಿಭಾಗಕ್ಕೆ ಸಾಕಷ್ಟು ಬೇಡಿಕೆ ಇದ್ದು, ಅದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರಾಜ್ಯಾದ್ಯಂತ ನಾಲ್ಕು ಉಚಿತ ಹಾಸ್ಟೆಲ್‌ಗಳನ್ನು ಕಟ್ಟಲು ತೀರ್ಮಾನ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲು ಉಚಿತ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಎಂದರು.
ಇದನ್ನೂ ಓದಿ | ಪಠ್ಯಪುಸ್ತಕ ವಿವಾದ: ಲಿಂಗಾಯತ, ಒಕ್ಕಲಿಗ ಆಯಿತು, ಈಗ ಕುರುಬ ಸಮುದಾಯದಿಂದಲೂ ಆಕ್ಷೇಪ