Site icon Vistara News

STRR Toll: ರಾಜಧಾನಿ ಹೊರ ವಲಯದಲ್ಲಿ ಮತ್ತೊಂದು ಟೋಲ್‌; ಯಾವಾಗ ಆರಂಭ?

Toll Fee Hike

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಟೋಲ್‌ ದರ ಹೆಚ್ಚಳಕ್ಕೆ ವಾಹನ ಸವಾರರು ಈಗಾಗಲೇ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ರಾಜಧಾನಿಯ ಹೊರ ವಲಯದಲ್ಲಿ ಮತ್ತೊಂದು ಕಡೆ ವಾಹನ ಸವಾರರಿಗೆ ಸುಂಕದ ಹೊರೆ (STRR Toll) ಬೀಳುವ ಸಾಧ್ಯತೆ ಇದೆ. ಏಕೆಂದರೆ, ಇನ್ನು ಮುಂದೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ (ಎಸ್‌ಟಿಆರ್‌ಆರ್) ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗವನ್ನು ಬಳಸುವ ವಾಹನಗಳು ಕೂಡ ಟೋಲ್‌ ಕಟ್ಟಬೇಕಾಗುತ್ತದೆ.

ಹೌದು, ನವೆಂಬರ್ 17 ರಿಂದ ಎಸ್‌ಟಿಆರ್‌ಆರ್ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗದಲ್ಲಿ ಸುಂಕ ವಸೂಲಿ ಆರಂಭಿಸಲು ಎನ್‌ಎಚ್‌ಎಐ ಮುಂದಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಹೊರವಲಯದ ನಗರಗಳನ್ನು ಸಂಪರ್ಕಿಸಲು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ನಿರ್ಮಿಸಲಾಗುತ್ತಿದೆ. ಬೆಂಗಳೂರನ್ನು ನೆರೆಯ ಪಟ್ಟಣಗಳಾದ ದಾಬಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ ಮತ್ತು ರಾಮನಗರದೊಂದಿಗೆ ಸಂಪರ್ಕಿಸಲು 288 ಕಿ.ಮೀ ಉದ್ದದ ಈ ಎಸ್‌ಟಿಆರ್‌ಆರ್‌ನಿಂದ ಅನುಕೂಲವಾಗುತ್ತದೆ.

ಈ ರಸ್ತೆ ಕಾಮಗಾರಿ ಮುಗಿದ ನಂತರ ವಾಣಿಜ್ಯ ವಾಹನಗಳು ಬೆಂಗಳೂರಿನ ಒಳಗೆ ಬರುವ ಅಗತ್ಯವಿರುವುದಿಲ್ಲ. ಸ್ಯಾಟಲೈಟ್‌ ನಗರಗಳ ಮೂಲಕ ರಾಜಧಾನಿಯನ್ನು ದಾಟಿ ಹೋಗಲು ಇದು ಸಹಾಯವಾಗುತ್ತದೆ. 17,000 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು 10 ಪ್ಯಾಕೇಜ್‌ಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಭಿವೃದ್ಧಿಪಡಿಸುತ್ತಿದೆ.

10 ಪ್ಯಾಕೇಜ್‌ಗಳಲ್ಲಿ ದೊಡ್ಡಬಳ್ಳಾಪುರ ಬೈಪಾಸ್ ಹೊಸಕೋಟೆ ಭಾಗ (34.15 ಕಿ.ಮೀ) ಪೂರ್ಣಗೊಂಡಿದೆ. ಇದು ಗಂಟೆಗೆ 10,000 ಪ್ಯಾಸೆಂಜರ್ ಕಾರ್ ಯುನಿಟ್ (PCU) ನೊಂದಿಗೆ ನಾಲ್ಕು ಲೇನ್‌ಗಳನ್ನು ಹೊಂದಿದೆ. ಈ ವಿಭಾಗಕ್ಕೆ ಟೋಲ್ ಶುಲ್ಕಗಳನ್ನು ವಿಧಿಸಲು ಭಾರತದ ಗೆಜೆಟ್‌ನಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವೆಂಬರ್ 9 ರಂದು ಅವುಗಳನ್ನು ಅನುಮೋದಿಸಿದೆ.

ಲಘು ಮೋಟಾರು ವಾಹನಗಳಿಗೆ ಒಂದು ಟ್ರಿಪ್‌ಗೆ 70 ರೂ. ಮತ್ತು 24 ಗಂಟೆಗಳ ಒಳಗೆ ಒಂದು ಸುತ್ತಿನ ಪ್ರಯಾಣಕ್ಕೆ 105 ರೂ., ಬಸ್ ಮತ್ತು ಟ್ರಕ್‌ಗಳು ಕ್ರಮವಾಗಿ 240 ಮತ್ತು 360 ರೂ. ದರ ವಿಧಿಸಲಾಗುತ್ತದೆ. ಟೋಲ್ ದರಗಳು 2024ರ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತವೆ. ದೇವನಹಳ್ಳಿ ಬಳಿಯ ನಲ್ಲೂರು ಟೋಲ್ ಪ್ಲಾಜಾದಲ್ಲಿ ಟೋಲ್‌ ಸಂಗ್ರಹಿಸಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಬೂತ್‌ಲೆಸ್ ಟೋಲ್ ಪ್ಲಾಜಾ

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಕರ್ನಾಟಕದ ಮೊದಲ ಬೂತ್‌ಲೆಸ್ ಟೋಲ್ ಪ್ಲಾಜಾ ಆಗಿದೆ. ಇದರಲ್ಲಿ ಟೋಲ್ ಕೇಂದ್ರಗಳು ಇರುವುದಿಲ್ಲ. ವಾಹನದ ನಂಬರ್ ಪ್ಲೇಟ್ ಮತ್ತು ತೂಕವನ್ನು ಟೋಲ್ ಪ್ಲಾಜಾದಿಂದ 50 ಮೀಟರ್ ಒಳಗೆ ತಲುಪಿದ ತಕ್ಷಣ ಸ್ಕ್ಯಾನ್ ಮಾಡಲಾಗುತ್ತದೆ. ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿಸಿದರೆ ಮತ್ತು ಉಳಿದೆಲ್ಲವೂ ಸರಿಯಾಗಿದ್ದರೆ, ಬೂಮ್ ತಡೆಗೋಡೆ ತೆರೆದು ವಾಹನವನ್ನು ಹೊರಗೆ ಬಿಡಲಾಗುತ್ತದೆ.

ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಟೋಲ್ ಅನ್ನು ನಗದು ರೂಪದಲ್ಲಿ ಪಾವತಿಸಲು ಸುತ್ತು ಹಾಕಬೇಕಾಗುತ್ತದೆ. ನಿಯಮ ಅನುಮತಿಸುವ ತೂಕದ ಶೇ.105 ಅನ್ನು ಸಾಗಿಸುವವರಿಗೆ 10 ಪಟ್ಟು ದಂಡವನ್ನು ವಿಧಿಸಲಾಗುತ್ತದೆ. ಮುಂದುವರಿಯಲು ಅನುಮತಿಸುವ ಸರಕು ಇಳಿಸುವಂತೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

42 ಕಿಮೀ ಉದ್ದದ ದಾಬಸ್‌ಪೇಟೆ- ದೊಡ್ಡಬಳ್ಳಾಪುರ ವಿಭಾಗವು ಶೇ. 90 ಪೂರ್ಣಗೊಂಡಿದೆ. ಇದು 2024 ರ ಜನವರಿಯಲ್ಲಿ ಸಿದ್ಧವಾಗಲಿದೆ. ಫೆಬ್ರವರಿಯಲ್ಲಿ ಟೋಲ್ ಸಂಗ್ರಹಣೆ ಪ್ರಾರಂಭವಾಗಲಿದೆ. 21 ಕಿ.ಮೀ ಹೊಸಕೋಟೆ-ತಮಿಳುನಾಡು ಗಡಿ ಭಾಗದ ಕಾಮಗಾರಿ ಶೇ.13ರಷ್ಟು ಪೂರ್ಣಗೊಂಡಿದೆ.

Exit mobile version