ಬೆಂಗಳೂರು: ನವ ದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ʻಬ್ರಾಹ್ಮಣರೇ ವಿಶ್ವವಿದ್ಯಾಲಯ ಬಿಟ್ಟು ಹೋರ ಹೋಗಿʼ ಎಂಬ ಗೋಡೆ ಬರಹಗಳು(Anti Brahmin Slogans) ಕಂಡುಬಂದಿರುವುದನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತೀವ್ರವಾಗಿ ಖಂಡಿಸಿದ್ದಾರೆ. ಕೆಲವರು ಪದೇಪದೆ ಜಾತಿ ಬಗ್ಗೆ ಮಾತನಾಡುತ್ತಾರೆ, ಈ ರೀತಿ ಮಾಡುವುದು ಸರಿಯಲ್ಲ. ಬ್ರಾಹ್ಮಣರನ್ನು ನಿಂದಿಸಿದರೆ ರಾತ್ರೋರಾತ್ರಿ ದೊಡ್ಡವರು ಆಗಿಬಿಡುತ್ತೇವೆ ಎಂದುಕೊಂಡಿದ್ದಾರೆ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ಜೆಎನ್‌ಯುನಲ್ಲಿ ಭಯೋತ್ಪಾದಕರು ಹಾಗೂ ಕಮ್ಯುನಿಸ್ಟರಿಗೆ ಬೆಂಬಲ ನೀಡುವ ವಿದ್ಯಾರ್ಥಿಗಳು ಇದ್ದಾರೆ. ಇವರು ಪದೇಪದೆ ಜಾತಿ ಬಗ್ಗೆ ಮಾತನಾಡಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | Anti Brahmin Slogans | ಜೆಎನ್‌ಯು ಗೋಡೆ ಮೇಲೆ ಬ್ರಾಹ್ಮಣ ವಿರೋಧಿ ಸಾಲುಗಳು, ಎಡಪಂಥೀಯರ ವಿರುದ್ಧ ಆಕ್ರೋಶ
ʻʻಬ್ರಾಹ್ಮಣರು ಎಂದರೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವವರು ಎಂದರ್ಥ. ನಮ್ಮ ಸಮುದಾಯ ಆ ಕೆಲಸ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ಮಾಡಿದವರಲ್ಲಿ ಬ್ರಾಹ್ಮಣರು ಇದ್ದಾರೆ. ಸೋ ಕಾಲ್ಡ್ ಸಮಾಜವಾದಿ, ಸಮತಾವಾದಿಗಳಿಗೆ ಇದು ಅರ್ಥವಾಗಲ್ಲ. ನಾವು ಶಾಂತಿ ಸ್ವರೂಪದವರು, ಆದರೆ ನಮ್ಮನ್ನು ಕೆಣಕಿದರೆ ಸುಮ್ಮನೆ ಇರಲ್ಲ, ನಿಮಗೆ ಪಾಠ ಕಲಿಸಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದ್ದಾರೆ.
ʻʻಸಿದ್ದರಾಮಯ್ಯ ಆಪ್ತ ಮಲ್ಲೇಶ್ ನಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಾವು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದೆವು. ನಮ್ಮ ಸಮುದಾಯದವರು ರಾಜ್ಯದಲ್ಲಿ 45 ಲಕ್ಷ ಜನ ಇದ್ದೇವೆ. ಯಾರೇ ಆಗಲಿ ಮಾತನಾಡುವ ಮುನ್ನ ಎಚ್ಚರಿಕೆ ವಹಿಸಬೇಕುʼʼ ಎಂದು ಹೇಳಿದರು.
ʻʻಕನ್ಹಯ್ಯ ಕುಮಾರ್ ಅಂತಹವರೇ ಇಂತಹ ಕೃತ್ಯಗಳಿಗೆ ಸಾಥ್ ಕೊಡುವುದು, ಭಯೋತ್ಪಾದಕರು ಮತ್ತು ಪಾಕಿಸ್ತಾನದ ಪರ ಮಾತನಾಡುವವರೇ ನಮ್ಮನ್ನು ವಿರೋಧ ಮಾಡುತ್ತಾರೆ. ರಾಜರ ಕಾಲದಿಂದಲೂ ನಮ್ಮ ಸಮುದಾಯದವರು ಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ. ಹಿಂದು ಧರ್ಮ ರಕ್ಷಣೆ ಮಾಡುವುದರಲ್ಲಿ ಅಪಾರ ಕೊಡುಗೆ ಇದೆ. ಸಮುದಾಯವನ್ನು ಅವಹೇಳನ ಮಾಡಿದರೆ ನಾವು ಸುಮ್ಮನೆ ಕೂರಲ್ಲ, ಹೋರಾಟಕ್ಕೆ ಇಳಿಯಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | Anti Brahmin Slogans | ಜೆಎನ್‌ಯು ಗೋಡೆ ಮೇಲೆ ಬ್ರಾಹ್ಮಣ ವಿರೋಧಿ ಸಾಲುಗಳು, ಎಡಪಂಥೀಯರ ವಿರುದ್ಧ ಆಕ್ರೋಶ