Site icon Vistara News

Rashtrotthana Parishat: ತಪಸ್-ಸಾಧನಾ ಯೋಜನೆಗೆ ಅರ್ಜಿ ಆಹ್ವಾನ; ಪಿಯುಸಿ ಜತೆಗೆ ಜೆಇಇ, ನೀಟ್‌ ಉಚಿತ ತರಬೇತಿ

Tapas Sadhana scheme

ಬೆಂಗಳೂರು: ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ಮಕ್ಕಳ ಐಐಟಿ ಎಂಜಿನಿಯರ್‌, ವೈದ್ಯ ಹಾಗೂ ಶಿಕ್ಷಕ ಆಗುವ ಕನಸನ್ನು ನನಸು ಮಾಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ (Rashtrotthana Parishat ಬೇಸ್ (BASE) ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ತಪಸ್-ಸಾಧನಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳು ಅ.1ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ʼತಪಸ್-ಸಾಧನಾʼ ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ರಾಷ್ಟ್ರೋತ್ಥಾನ ಪರಿಷತ್‌ ಹಮ್ಮಿಕೊಂಡಿರುವ ವಿನೂತನ ಯೋಜನೆಗಳಾಗಿವೆ. ವಿದ್ಯಾರ್ಥಿಗಳಿಗೆ ‘ತಪಸ್‌’ ಹಾಗೂ ವಿದ್ಯಾರ್ಥಿನಿಯರಿಗೆ ‘ಸಾಧನಾ’ ಯೋಜನೆಯಲ್ಲಿ ಉಚಿತವಾಗಿ ಪಿಯುಸಿ ಶಿಕ್ಷಣದ ಜತೆ ವೃತ್ತಿಪರ ಕೋರ್ಸ್‌ ಪ್ರವೇಶ ಪಡೆಯಲು ತರಬೇತಿ ನೀಡಲಾಗುತ್ತದೆ.

ಏನಿದು ತಪಸ್-ಸಾಧನಾ ಯೋಜನೆ?

ಪಿಯುಸಿ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣಕ್ಕೆ ಅರ್ಹ ತರಬೇತಿ ನೀಡುವ ಯೋಜನೆ ಇದಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತದೆ. ʼತಪಸ್‌ʼ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಪ್ರತಿಷ್ಠಿತ ಐಐಟಿ-ಜೆಇಇ ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ‘ಸಾಧನಾ’ ಯೋಜನೆಯಲ್ಲಿ ವಿದ್ಯಾರ್ಥಿನಿಯರಿಗೆ ಪಿಯುಸಿ ಹಾಗೂ ಎನ್‌ಇಇಟಿ(NEET), ಶಿಕ್ಷಣ ತರಬೇತಿ ನೀಡಲಾಗುತ್ತದೆ.

ಕಳೆದ 10 ವರ್ಷದಲ್ಲಿ ತಪಸ್‌ ಯೋಜನೆಯಲ್ಲಿ 366 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು, 36 ಮಂದಿ ಐಐಟಿ ಪ್ರವೇಶ ಪಡೆದಿದ್ದಾರೆ. ಇನ್ನು 92 ಮಂದಿಗೆ ಎನ್‌ಐಟಿ ಸೀಟ್‌ ಸಿಕ್ಕಿದೆ. ಅದೇ ರೀತಿ ಸಾಧನಾ ಯೋಜನೆಯಲ್ಲಿ ಕಳೆದ 5 ವರ್ಷದಲ್ಲಿ 246 ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿದ್ದು, 58 ಮಂದಿಗೆ ಎಂಬಿಬಿಎಸ್‌ ಮೆರಿಟ್‌ ಸೀಟ್‌ ದೊರೆತಿದೆ.

ಇದನ್ನೂ ಓದಿ | BEML Group C Recruitment: ಐಟಿಐ ಪಾಸಾದವರಿಗೆ ಸಿಹಿ ಸುದ್ದಿ; ಬಿಇಎಂಎಲ್‌ನಲ್ಲಿ 119 ಹುದ್ದೆಗೆ ಅರ್ಜಿ ಸಲ್ಲಿಸಿ

ಪ್ರಸ್ತುತ 10ನೇ ತರಗತಿ ಓದುತ್ತಿರುವ ಹಾಗೂ 9ನೇ ತರಗತಿಯಲ್ಲಿ ಕನಿಷ್ಠ ಶೇ.90 ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ (ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮೀರದ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಹ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆಯಾದವರು ತಪಸ್-ಸಾಧನಾ ಯೋಜನೆ ಸೌಲಭ್ಯ ಪಡೆಯಬಹುದು.

ನೋಂದಣಿಗಾಗಿ ತಪಸ್‌-ಸಾಧನಾ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹೆಚ್ಚಿನ ಮಾಹಿತಿಗಾಗಿ ಫೇಸ್‌ಬುಕ್‌ ಲಿಂಕ್‌ ವೀಕ್ಷಿಸಿ

Exit mobile version