ಬೆಂಗಳೂರು: ತಮ್ಮ ಸರಳತೆಯಿಂದಲೇ ಎಲ್ಲರ ಮನಗೆದ್ದವರು ಪುನೀತ್ ರಾಜಕುಮಾರ್. ಇವರ ಅಕಾಲಿಕ ಸಾವು ಕರುನಾಡಿನ ಜನರು ದುಃಖದಲ್ಲಿ ಮುಳುಗುವಂತೆ ಮಾಡಿತ್ತು.
ಪುನೀತ್ ನಮ್ಮೊಂದಿಗೆ ಇರದೇ ಒಂದು ವರ್ಷ ಕಳೆದರೂ ಆ ನೋವು ಅಭಿಮಾನಿಗಳಲ್ಲಿ ಕಡಿಮೆ ಆಗಿಲ್ಲ. ಪುನೀತ್ ಅವರ ಒಂದು ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ (Appu namana) ಪೂಜೆ ಸಲ್ಲಿಸಿದರು. ಪುನೀತ್ ಪತ್ನಿ ಅಶ್ವಿನಿ ಅವರಂತೂ ಭಾವುಕರಾಗಿ ಕಣ್ಣೀರು ಹರಿಸಿದರು.
ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ, ರಾಘವೇಂದ್ರ ರಾಜಕುಮಾರ್, ಯುವರಾಜ್ ಕುಮಾರ್, ಪುನೀತ್ ರಾಜಕುಮಾರ್ ಅವರ ಅಂಗರಕ್ಷಕರಾಗಿದ್ದ ಚಲಪತಿ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದರು. ಪುನೀತ್ ಅವರ ಅಕ್ಕ ಲಕ್ಷ್ಮಿ ಹಾಗೂ ಅವರ ಪತಿ ಗೋವಿಂದ್, ಧನ್ಯ ರಾಮಕುಮಾರ್ ಆಗಮಿಸಿ ದರ್ಶನ ಮಾಡಿದರು.
ಪೂಜೆ ಬಳಿಕ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಪುನೀತ್ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾನೆ. ಇಂಥವನ ಜತೆಗೆ ಹುಟ್ಟಿರುವುದು ಸಂತೋಷ ಆಗುತ್ತಿದೆ. ಪುನೀತ್ ಎದುರಿಗೆ ಹಾಡುವುದು ಖುಷಿ ಆಗುತ್ತದೆ. ಹೀಗಾಗಿ, ವೇದಿಕೆ ಮೇಲೆ ಬಂದು ಹಾಡಿದೆ. ಪುನೀತ್ ಅಗಲಿಕೆ ಮೊದಲೇ ವಿಧಿ ಬರೆದಿತ್ತು ಅನ್ನಿಸುತ್ತದೆ. ಆದರೆ ಅಭಿಮಾನಿಗಳು ಒಂದು ವರ್ಷ ಕಳೆದರೂ ಯಾರು ಅಪ್ಪುನ ಮರೆತಿಲ್ಲ. ಅಪ್ಪು ನೀನು ಎಲ್ಲೇ ಹೋಗಿರಬಹುದು ನಮ್ಮ ಮನಸ್ಸನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಸಮಾಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಿವಾಸಕ್ಕೆ ಆಗಮಿಸಿದ ಪುನೀತ್ ಕುಟುಂಬಸ್ಥರು, ಮನೆಯಲ್ಲಿಯೂ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಿವಾಸದಲ್ಲಿ ಸಂಬಂಧಿಕರು, ಅಭಿಮಾನಿಗಳು ಸೇರಿದಂತೆ ಒಂದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ದೋಸೆ, ವಡೆ, ಪಲಾವ್ ಸೇರಿ ವಿವಿಧ ಬಗೆಯ ಖಾದ್ಯ ಮಾಡಲಾಗಿದೆ.
ಅಪ್ಪು ಮನೆ ಮುಂದೆ ಅಭಿಮಾನಿಗಳ ದಂಡು
ಅಪ್ಪು ನಿವಾಸದ ಮುಂದೆ ದಂಡು ದಂಡಾಗಿ ಅಭಿಮಾನಿಗಳು ಆಗಮಿಸುತ್ತಿದ್ದು, ಶಿವರಾಜಕುಮಾರ್ ಜತೆಗೆ ಫೋಟೊ ತೆಗೆಸಿಕೊಳ್ಳಲು ಕಾದುಕುಳಿತಿದ್ದಾದ್ದರು. ಮನೆ ಬಳಿ ಬರುತ್ತಿರುವ ಅಭಿಮಾನಿಗಳನ್ನು ಮರಳಿ ಕಳುಹಿಸಲು ಪೊಲೀಸರು ಹರಸಾಹಸಪಡಬೇಕಾಗಿದೆ.
ಇದನ್ನೂ ಓದಿ | Appu Namana | ರೇಷ್ಮೆ ಸೀರೆಯಲ್ಲಿ ಮೂಡಿದ ಪುನೀತ್ ಭಾವಚಿತ್ರ; ಅಭಿಮಾನಿಗಳಿಂದ ಅಶ್ವಿನಿಗೆ ಉಡುಗೊರೆ