ಸಾಗರ: ಈ ಆರ್ಥಿಕ ಸಾಲಿನಲ್ಲಿ ಸಂಸ್ಥೆಯು 89,964 ಮೂಟೆ ಅಡಿಕೆ (Areca nut) ಅವಕ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಅತಿಹೆಚ್ಚು ಅಡಿಕೆ ಆವಕ ಮಾಡಿಕೊಂಡ ಸಹಕಾರಿ ಸಂಸ್ಥೆ ನಮ್ಮದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಪ್ಸ್‌ಕೋಸ್ ನ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ತಿಳಿಸಿದರು.
ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ (ಆಪ್ಸ್‌ಕೋಸ್) ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯು 4.92 ಕೋಟಿ ರೂ. ಐತಿಹಾಸಿಕ ಲಾಭಗಳಿಸಿದ್ದು, ರಾಜ್ಯದಲ್ಲಿಯೆ ಅತಿಹೆಚ್ಚು ಲಾಭಗಳಿಸಿದ ಎರಡನೇ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಶೇ. 95ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಆರ್ಥಿಕ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ರೈತರನ್ನು ಸಾಲಬಾಧೆಯಿಂದ ಹೊರಗೆ ತರಬೇಕು ಎನ್ನುವ ಉದ್ದೇಶದಿಂದ ಸಾಲದ ಮೇಲಿನ ಬಡ್ಡಿಯನ್ನು ತೀರ ಕಡಿಮೆ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: Aditya-L1: ಈ ದಿನಾಂಕದಂದು ಮಿಷನ್ ಆದಿತ್ಯ ಎಲ್ 1 ಆರಂಭಿಸಲು ಇಸ್ರೊ ಸಿದ್ಧತೆ
ಸುವರ್ಣ ಮಹೋತ್ಸವ ಆಚರಿಸಿರುವ ಆಪ್ಸ್‌ಕೋಸ್ ಹಿರಿಯ ಸಹಕಾರಿಗಳ ಪರಿಕಲ್ಪನೆಯಾಧಾರದಲ್ಲಿ ನಿರ್ಮಾಣವಾಗಿದ್ದು, ಅನೇಕ ಸಹಕಾರಿಗಳು ಇದನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ನಮ್ಮ ಆಡಳಿತ ಮಂಡಳಿ ಸಹ ಷೇರುದಾರರು ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದೇವೆ ಎನ್ನುವ ಆತ್ಮತೃಪ್ತಿಯನ್ನು ಹೊಂದಿದೆ.
ಸಾಗರ, ಹೊಸನಗರ, ನಿಟ್ಟೂರು, ತುಮರಿ ಭಾಗದಲ್ಲಿ ಗೋದಾಮು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದ್ದು ಇದಕ್ಕಾಗಿ 10 ಕೋಟಿ ರೂ. ಕಾಯ್ದಿರಿಸಲಾಗಿದೆ. ಏಳು ಎಕರೆ ಜಾಗದಲ್ಲಿ ಸೋಲಾರ್ ವಿದ್ಯುತ್ ತಯಾರಿಕಾ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಸಹ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: Bengaluru News: ಬಾಲಕಾರ್ಮಿಕ ಪದ್ಧತಿ ತಡೆಗೆ ಕಾರ್ಮಿಕ ಇಲಾಖೆಯಿಂದ ಜಾಗೃತಿ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಓ.ರಾಮಚಂದ್ರ, ನಿರ್ದೇಶಕರಾದ ಬಿ.ಎ.ಇಂದೂಧರ, ಕಟ್ಟಿನಕೆರೆ ಸೀತಾರಾಮಯ್ಯ, ಆರ್.ಎಸ್.ಗಿರಿ, ಸುಬ್ರಾವ್ ಕೆ.ಎಸ್., ಕಲ್ಯಾಣಪ್ಪ ಗೌಡ, ಗುರುಪಾದ ಕೆರೆಕೊಪ್ಪ, ರಾಘವೇಂದ್ರ ಹೊಡಬಟ್ಟೆ, ಲಂಬೋಧರ್, ಕೆ.ಎಂ.ಸತ್ಯನಾರಾಯಣ್ ಇನ್ನಿತರರು ಹಾಜರಿದ್ದರು.