ಗಂಗಾವತಿ: ಹಣ್ಣುಗಳನ್ನು ತ್ವರಿತಗತಿಯಲ್ಲಿ ಮಾಗಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ದುಡ್ಡು ಮಾಡಬೇಕೆಂಬ ಕಾರಣಕ್ಕೆ ನಗರದಲ್ಲಿ ಬಹುತೇಕ ವರ್ತಕರು ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ರಾಸಾಯನಿಕಗಳನ್ನು (Artificially Ripened Fruits) ಬಳಸುತ್ತಿದ್ದು, ಇದರಿಂದ ಜನರಲ್ಲಿ ಕ್ಯಾನ್ಸರ್‌ನಂತ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬ ದೂರು ದಾಖಲಾಗಿದೆ.
ನಗರಸಭೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ರಾಚಪ್ಪ ಸಿದ್ದಾಪುರ ಅವರು ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದು, ಕೃತಕವಾಗಿ ರಾಸಾಯನಿಕಗಳನ್ನು ಬಳಸಿಕೊಂಡು ಹಣ್ಣುಗಳನ್ನು ಮಾಗಿಸುವ ಘಟಕಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಬೇಗನೇ ಮಾಗಿಸುವ ಮತ್ತು ಆಕರ್ಷಕ ಬಣ್ಣಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ವರ್ತಕರು ಕ್ಯಾಲ್ಷಿಯಂ ಕಾರ್ಬೈಡ್‌ನಂತಹ (calcium carbide) ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ಯಾಲ್ಷಿಯಂ ಕಾರ್ಬೈಡ್‌ನಿಂದ ಆರ್ಸೆನಿಕ್ ಮತ್ತು ಫಾಸ್ಪರಸ್‌ನಂತಃ ಅಂಶಹೊಂದಿರುವ ಅಸಿಟಿಲಿನ್ ಎಂಬ ಅನಿಲ ಬಿಡುಗಡೆಯಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂತಹ ರಾಸಾಯನಿಕಯುಕ್ತ ಹಣ್ಣುಗಳನ್ನು ದೀರ್ಘಕಾಲ ಬಳಕೆ ಮಾಡಿದರೆ ಕ್ಯಾನ್ಸರ್‌ನಂತಹ ಕಾಯಿಲೆ ಬರುತ್ತದೆ.
ಈ ಹಿಂದಿನ ಕಾಲದಲ್ಲಿ ಬಿಡಿ-ಸಿಗರೇಟ್, ಜರ್ದಾ, ಗುಟ್ಕಾದಂತ ದುಶ್ಚಟಗಳಿರುವ ವ್ಯಕ್ತಿಗಳಿಗೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಯಾವುದೇ ಚಟವಿಲ್ಲದ ವ್ಯಕ್ತಿಗಳಲ್ಲೂ ಕ್ಯಾನ್ಸರ್‌ನಂತಹ ಕಾಯಿಲೆ ಕಾಣಿಸಿಕೊಳ್ಳಲು ಹಣ್ಣುಗಳಿಗೆ ಉಪಯೋಗಿಸುವ ರಾಸಾಯನಿಕಗಳು ಕಾರಣವಾಗಿದೆ.
ಇದನ್ನೂ ಓದಿ | FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?
ಕೂಡಲೇ ನಗರಸಭೆಯ ಅಧಿಕಾರಿಗಳು ಸೂಕ್ತಗಮನ ಹರಿಸಿ ರಾಸಾಯನಿಕಗಳಿಂದ ಹಣ್ಣುಗಳನ್ನು ಕೃತಕವಾಗಿ ಮಾಗಿಸುವ ಘಟಕಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಚಪ್ಪ ಸಿದ್ದಾಪುರ ಒತ್ತಾಯಿಸಿದ್ದಾರೆ.