ದೇವನಹಳ್ಳಿ: ನಮ್ಮನ್ನು ನೋಡಿ ನಾಯಿ ಬೊಗಳುತ್ತಿದೆ, ಅದಕ್ಕೆ ಬುದ್ಧಿ ಹೇಳೊಕ್ಕೆ ಆಗಲ್ವಾ ಎಂದು ಕ್ಯಾತೆ ತೆಗೆದ ಕಿರಾತಕರು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕುವಿನಿಂದ ಇರಿದಿರುವ ಘಟನೆ ದೇವನಹಳ್ಳಿ ತಾಲೂಕಿನ ದೊಡ್ಡಚೀಮನಹಳ್ಳಿಯಲ್ಲಿ ನಡೆದಿದೆ.
ಮಧುಕುಮಾರ್ (34) ಚಾಕು ಇರಿತಕ್ಕೊಳಗಾದವರು. ಚಾಕು ಇರಿತದ ರಭಸಕ್ಕೆ ದೇಹದೊಳಗೆ ಚಾಕುವಿನ ತುದಿಯ ಚೂರು ಉಳಿದುಕೊಂಡಿದೆ. ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಚಾಕುವಿನ ಚೂರು ಇರುವುದು ಬಯಲಾಗಿದೆ. ಅದೇ ಗ್ರಾಮದ ಸುನೀಲ್, ಅನೀಲ್, ದೇವರಾಜ್ ಹಾಗೂ ಅಜಯ್ ಎಂಬುವವರಿಂದ ಈ ಕೃತ್ಯ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಇವರನ್ನು ನೋಡಿ ನಾಯಿ ಬೊಗಳಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಈ ದುರುಳರು ಮಧುಕುಮಾರ್ ಜತೆಗೆ ಜಗಳಕ್ಕೆ ನಿಂತಿದ್ದರು. ನಮ್ಮನ್ನು ನೋಡಿ ನಿನ್ನ ನಾಯಿ ಬೊಗಳುತ್ತಿದೆ, ಅದಕ್ಕೆ ಬುದ್ಧಿ ಹೇಳು ಎಂದು ಕ್ಯಾತೆ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಗುಂಪಿನಲ್ಲಿದ್ದ ಮತ್ತೊಬ್ಬ ಚಾಕುವಿನಿಂದ ಮಧುಕುಮಾರ್‌ಗೆ ಇರಿದಿದ್ದಾನೆ. ಮಂಜುನಾಥ್ , ಮಮತಾರಿಗೂ ಥಳಿಸಿದ್ದಾರೆ.
ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ 307, 504, 506, 354, 324, 149, 143, 147, 148 , 448 & 355 ರಡಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದೊಡ್ಡಚೀಮನಹಳ್ಳಿ ಘಟನೆ ನಡೆದಿದೆ.
ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಆ್ಯಸಿಡ್ ಎರಚಿದ ದುರುಳ
ಚಿಕ್ಕಮಗಳೂರು: ಸಾಕು ನಾಯಿಯೊಂದು ಒಂದೇ ಸಮನೇ ಬೊಗಳತ್ತಿತ್ತು. ಶ್ವಾನದ ಮಾಲೀಕರು ಹಲವಾರು ಬಾರಿ ಗದರಿಸಿದರೂ ಸುಮ್ಮನಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಶ್ವಾನದ ಮಾಲೀಕರು ಬೈಯಲು ಶುರು ಮಾಡಿದ್ದರು. ಇದೇ ವೇಳೆ ಅಲ್ಲಿದ್ದ ಪಕ್ಕದ ಮನೆಯವ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿ, ಏಕಾಏಕಿ ಆ್ಯಸಿಡ್ (Acid attack) ಅನ್ನು ಮುಖಕ್ಕೆ ಎರಚಿದ್ದ ಘಟನೆಯು ನಡೆದಿತ್ತು.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಜೇಮ್ಸ್ ಎಂಬಾತ ಸುಂದರ್ ರಾಜ್ ಅವರಿಗೆ ಆ್ಯಸಿಡ್ ದಾಳಿ ನಡೆಸಿದವನು. ಈ ಜೇಮ್ಸ್ ಹಾಗೂ ಸುಂದರ್ ರಾಜ್ ನೆರೆಮನೆಯವರಾದರೂ ಇವರ ಬಾಂಧವ್ಯ ಅಷ್ಟಕಷ್ಟೇ ಇತ್ತು. ಸುಂದರ್ ರಾಜ್ ಅವರ ಮನೆಯ ಆವರಣಲ್ಲಿ ಕಟ್ಟಿಹಾಕಿದ್ದ ಶ್ವಾನವು ಬೊಗಳುತ್ತಿತ್ತು, ಹೀಗಾಗಿ ಶ್ವಾನಕ್ಕೆ ಬೈಯುತ್ತಿದ್ದರು. ಆಗ ಎದುರಿಗೆ ಬಂದ ಜೇಮ್ಸ್ ನಾಯಿ ಹೆಸರಿನಲ್ಲಿ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿದ್ದ. ಸುಂದರಾಜ್ ಮೇಲಿನ ಸಿಟ್ಟಿಗೆ ಆ್ಯಸಿಡ್ ದಾಳಿ ಮಾಡಿದ್ದ.
ಆ್ಯಸಿಡ್ ದಾಳಿಗೊಳಗಾಗಿರುವ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿತ್ತು. ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.