Site icon Vistara News

Assembly Session 2024: ಗ್ರೇಟರ್ ಬೆಂಗಳೂರು; ಪ್ರತಿಪಕ್ಷ ನಾಯಕರ ಅಭಿಪ್ರಾಯ ಪಡೆಯದೇ ತೀರ್ಮಾನಿಸುವ ಮೂರ್ಖ ನಾನಲ್ಲ ಎಂದ ಶಿವಕುಮಾರ್

everyone advice and opinion will be sought for the Greater Bangalore Bill says DCM DK Shivakumar

ಬೆಂಗಳೂರು: ಬೆಂಗಳೂರು ಎಲ್ಲರಿಗೂ ಸೇರಿದ್ದು. ಹೀಗಾಗಿ ಬೆಂಗಳೂರಿನ ಹಿತ ಕಾಪಾಡಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಎಲ್ಲಾ ನಾಯಕರ ಅಭಿಪ್ರಾಯ, ಸಲಹೆ ಪಡೆಯಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Assembly Session 2024) ತಿಳಿಸಿದರು.

ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ ಮಾಡಿದಾಗ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕರಾದ ಅಶ್ವತ್ಥ್ ನಾರಾಯಣ ಹಾಗೂ ಸುರೇಶ್ ಕುಮಾರ್ ಅವರು ಈ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾನು ಹಳ್ಳಿಯಲ್ಲಿ ಹುಟ್ಟಿರಬಹುದು. ಆದರೆ 5ನೇ ವಯಸ್ಸಿನಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿ ಆರಿತಿದ್ದೇನೆ. ನಾನು ರಾಜಕೀಯವಾಗಿ ಬೇರೆಡೆ ಪ್ರತಿನಿಧಿಸುತ್ತಿದ್ದೇನೆ. ನನಗೂ ಬೆಂಗಳೂರಿನ ಬಗ್ಗೆ ಕಾಳಜಿ ಇದೆ. ಅಧಿಕಾರಿಗಳ ಸಮಿತಿ ಮಾಡಿದ್ದಾಗ ಅವರು ಲಂಡನ್ ಮಾದರಿ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲು ಆಗುತ್ತಿಲ್ಲ. ಇರುವ ವ್ಯವಸ್ಥೆಯನ್ನೇ ಸ್ವಲ್ಪ ಪ್ರಮಾಣದಲ್ಲಿ ಮಾರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಬಜೆಟ್‌ ದಿನ ಕುಸಿದಿದ್ದ ಚಿನ್ನದ ದರ

ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರುಗಳ ಅಭಿಪ್ರಾಯ ಪಡೆಯದೇ ತೀರ್ಮಾನ ಮಾಡುವಷ್ಟು ಮೂರ್ಖ ನಾನಲ್ಲ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಶಾಸಕರ ಜತೆ ಮಾತನಾಡಿ, ಈ ವಿಚಾರ ಹೆಚ್ಚು ಚರ್ಚೆಯಾಗಲಿ, ಬೆಂಗಳೂರಿನ ಹಿತಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳೋಣ. ಪ್ರತಿಪಕ್ಷದವರು ಬೇಡ ಎಂದರೆ ನಾವು ಮಾಡಲು ಆಗುವುದಿಲ್ಲ. ಬಿಜೆಪಿಯವರೂ ಹಿಂದೆ ಬೆಂಗಳೂರು ಜಿಲ್ಲಾ ಮಂತ್ರಿಯಾಗಿದ್ದರು. ನಾನು ಈ ವಿಧೇಯಕವನ್ನು ಸಾರಸಗಟಾಗಿ ಅಂಗೀಕಾರ ಮಾಡಿ ಎಂದು ಹೇಳುತ್ತಿಲ್ಲ. ಚರ್ಚೆಗಾಗಿಯೇ ಮಂಡನೆ ಮಾಡುತ್ತಿದ್ದೇನೆ. ಈ ವಿಧೇಯಕದ ಪ್ರತಿ ಸಾಲನ್ನೂ ಪರಾಮರ್ಶೆ ಮಾಡಿ, ಅಭಿಪ್ರಾಯ ಹೇಳಿ ಎಂದು ಹೇಳಿದರು.

ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, ಹೊರಗಿನಿಂದ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಇಂದು ಒಂದೂವರೆ ಕೋಟಿಯಷ್ಟಾಗಿದೆ. ಹೊರ ವರ್ತುಲ ರಸ್ತೆಗಳು ಈಗ ನಗರದ ಮಧ್ಯ ಭಾಗವಾಗಿವೆ. ವಾಹನಗಳ ಸಂಖ್ಯೆಯೇ ಒಂದು ಕೋಟಿ ಮೀರಿದೆ. ನೀರಿನ ವ್ಯವಸ್ಥೆ ಮಾಡಬೇಕು, ಕಸದ ಸಮಸ್ಯೆ ಸೇರಿದಂತೆ ಬೆಂಗಳೂರಿನಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಹಿತ ದೃಷ್ಟಿಯಿಂದ ಈ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ. ಇದು ಉತ್ತಮವಾಗಿದೆಯೋ, ಉತ್ತಮವಾಗಿಲ್ಲವೋ ಎಂಬುದನ್ನು ಚರ್ಚೆ ಮಾಡೋಣ. ಚರ್ಚೆ ಮಾಡದೇ ಏನೂ ಮಾಡುವುದಿಲ್ಲ ಎಂದರು.

ರಾಜ್ಯ ರಾಜಧಾನಿಯು ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಎಲ್ಲಾ ಭಾಗದವರಿಗೂ ಸೇರಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಾಗ ಒಂದು ಮಾತು ಹೇಳಿದ್ದರು. ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ಬೆಂಗಳೂರಿನ ಮಹತ್ವದ ಬಗ್ಗೆ ನನಗೂ ಅರಿವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನೀವು ಇದನ್ನು ಯಾವ ರೀತಿ ಮಾಡಬೇಕು ಎಂದು ಹೇಳುತ್ತೀರೋ ಆ ರೀತಿ ಮಾಡೋಣ ಎಂದರು.

ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, “ಇದೇ ತಿಂಗಳು 27ರಂದು ಸಭೆ ಕರೆದಿದ್ದೀರಲ್ಲಾ, ಅಂದು ಚರ್ಚೆ ಮಾಡೋಣ” ಎಂದು ಹೇಳಿದಾಗ, ಶಿವಕುಮಾರ್ ಅವರು “ಅಂದು ಈ ವಿಚಾರವನ್ನೂ ಚರ್ಚಿಸೋಣ” ಎಂದು ತಿಳಿಸಿದರು.

ಇದನ್ನೂ ಓದಿ: The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

ಮತ್ತೆ ಮಾತನಾಡಿದ ಅಶೋಕ್, “ಕೇವಲ ಬೆಂಗಳೂರು ಮಾತ್ರವಲ್ಲ, ಕನಕಪುರವೂ ಎಲ್ಲರಿಗೂ ಸೇರಬೇಕು” ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಕನಕಪುರ ನಿಮಗೂ ಸೇರಬೇಕು. ಅಲ್ಲಿನ ಜನ ನಿಮಗೂ ಮತ ಹಾಕಿದ್ದಾರಲ್ಲ” ಎಂದು ಹಾಸ್ಯದಿಂದಲೇ ತಿರುಗೇಟು ಕೊಟ್ಟರು.

ರಾಜ್ಯ ರಾಜಧಾನಿಯ ಅಭಿವೃದ್ದಿಗೆ ಗ್ರೇಟರ್ ಬೆಂಗಳೂರು ಬಿಲ್: ಡಿಸಿಎಂ ಡಿ.ಕೆ. ಶಿವಕುಮಾರ್

ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ನಾಲ್ಕು ಗೋಪುರಗಳನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಬಿಲ್ ಮಂಡನೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಬಿಡ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು “ಕಳೆದ ಒಂದು ವರ್ಷದಿಂದ ನಮ್ಮ ಸಾರ್ವಜನಿಕರಿಂದ 70 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ಇವುಗಳನ್ನು ಕ್ರೋಢಿಕರಿಸಿ ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ಸಿದ್ದಪಡಿಸಲಾಗಿದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಹೆಸರನ್ನು ಅಂತರರಾಷ್ಟೀಯ ಮಟ್ಟಕ್ಕೆ ಬೆಳೆಸಿದರು. ಇಂತಹ ಬೆಂಗಳೂರನ್ನು ನಾವು ಉಳಿಸಬೇಕಾಗಿದೆ” ಎಂದು ಹೇಳಿದರು.

ಸಚಿವನಾದ ತಕ್ಷಣ ಬೆಂಗಳೂರಿಗೆ 6 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಗರದ ಜನರಿಗೆ ನೀರು, ಭದ್ರತೆ, ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ವಾಹನಗಳ ಸಂಖ್ಯೆ, ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಇದ್ದಷ್ಟೇ ಇದೆ. ಈ ಸವಾಲುಗಳನ್ನು ಇಟ್ಟುಕೊಂಡೇ ಬೆಂಗಳೂರು ಅಭಿವೃದ್ಧಿ ಮಾಡಬೇಕಾಗಿದೆ ಎಂದರು.

ನೀರಿನ ದರ ಏರಿಕೆಗೆ ಚಿಂತನೆ

“ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿ ಕಷ್ಟದಲ್ಲಿದೆ. ದರ ಹೆಚ್ಚಳ ಮಾಡಿದರೆ ವಿರೋಧ ವ್ಯಕ್ತವಾಗುತ್ತದೆ. ಆದರೂ ಮಂಡಳಿಯ ಉಳಿವಿಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

“ರೈತ ಸಗಣಿ ಬಾಚಿ, ಹಸು ಕಟ್ಟಿಕೊಂಡು ಕಷ್ಟಪಡುತ್ತಾನೆ. ಆತ ಕೊಡುವ ಹಾಲಿಗೆ 2 ರೂಪಾಯಿ ಬೆಲೆ ಹೆಚ್ಚಳ ಮಾಡಿದರೆ ಬಡಿದಾಡುತ್ತಾರೆ. ಒಂದು ಲೀಟರ್‌ ನೀರಿನ ಬಾಟಲಿ ದರ 25 ರೂಪಾಯಿ ಇದೆ. ರೈತನ ಬಗ್ಗೆ ಕಾಳಜಿಯಿಲ್ಲ. ಆದರೆ ಬಾಟಲಿ ನೀರಿಗೆ ಎಷ್ಟು ದುಡ್ಡು ಬೇಕಾದರೂ ಕೊಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆಗಳನ್ನು ಉಳಿಸಲು ಹೊಸ ಯೋಜನೆ

ಬೆಂಗಳೂರು ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಇಲಾಖೆಯ ವ್ಯಾಪ್ತಿಗೆ ತೆಗೆದುಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸಿಕೊಳ್ಳಲಾಗುವುದು. ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವ ಕೆಲಸ ಮಾಡಲಾಗುವುದು. ಇದರಿಂದ ಒತ್ತುವರಿಯನ್ನು ತಡೆಯಬಹುದು ಎಂದರು.

ನೂತನ ಬಿಲ್ ಅಲ್ಲಿ ಬಿಡಿಎ ಮತ್ತು ಬಿಡ್ಲ್ಬೂಎಸ್‌ಎಸ್‌ಬಿಯನ್ನು ವಿಲೀನ ಮಾಡಬೇಕು ಎನ್ನುವ ಸಲಹೆ ಬಂದಿತ್ತು. ನಾನು ಒಪ್ಪಿಗೆ ನೀಡಲಿಲ್ಲ. ನಿಮ್ಮನ್ನು ರಾಜಕಾರಣಕ್ಕೆ ಎಳೆಯುವುದು ಬೇಡ ಇಲಾಖೆಯ ಸ್ವಾಯತ್ತತೆ ಉಳಿಯಲಿ ಎಂದು ತೀರ್ಮಾನ ಮಾಡಿದೆ. ವಿಲೀನವಾದಷ್ಟು ಕಷ್ಟವಾಗಿತ್ತದೆ ಎಂದರು.

ಸಿಬ್ಬಂದಿಗಳ ನೇಮಕಾತಿಗೆ ಕ್ರಮ

ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದೇ ಇರುವ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿದ್ದವು. ನೀರಿನ ಸಮಸ್ಯೆಯನ್ನು ಬೆಂಗಳೂರು ಜಲಮಂಡಳಿ ಸಿಬ್ಬಂದಿ ಹಾಗೂ ನೌಕರರು ನಗರದಲ್ಲಿ ಎದುರಾಗಿದ್ದ ಬರಗಾಲವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದೀರಿ. ನಿಮ್ಮ ಸೇವೆ ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರು ಬಿಜಿನೆಸ್ ಕಾರಿಡಾರ್

2006 ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಮಾಡುವಾಗ ಸರಿಯಾದ ಯೋಜನೆ ಮಾಡದ ಕಾರಣ ನಗರದ ಒಳಗೆ ಬಂದುಬಿಟ್ಟಿದೆ. ಈಗ ಹೊಸದಾಗಿ 150 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುವುದು. ಸುಮಾರು 25 ಸಾವಿರ ಕೋಟಿ ಖರ್ಚಾಗಲಿದೆ. ಇದಕ್ಕೆ ಪ್ರತ್ಯೇಕ ಕಂಪನಿ ಸ್ಥಾಪಿಸಿ ನಿರ್ಮಾಣ ಮಾಡಲಾಗುವುದು. ಇದನ್ನು ʼಬೆಂಗಳೂರು ಬಿಜಿನೆಸ್ ಕಾರಿಡಾರ್ʼ ಎಂದು ಕರೆಯಲಾಗುವುದು” ಎಂದರು.

ಇದನ್ನೂ ಓದಿ: Teachers Transfer: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಆರಂಭ

ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ವಧರ್ಮಕ್ಕೂ ಸಲ್ಲುವ ವ್ಯಕ್ತಿ ಇವರು. ಬೆಂಗಳೂರಿನ ಘನತೆ, ಇತಿಹಾಸವನ್ನು ಉಳಿಸೋಣ ಎಂದು ಡಿಸಿಎಂ ಡಿಕೆ. ಶಿವಕುಮಾರ್‌ ತಿಳಿಸಿದರು.

Exit mobile version