Site icon Vistara News

Assembly session : ಈಶ್ವರ ಖಂಡ್ರೆ ವಿರುದ್ಧ ಸ್ಪೀಕರ್‌ ಗರಂ; ಗದ್ದಲದ ಬಳಿಕ ಶಾಂತರಾದ ಕಾಗೇರಿ, ಕಾಂಗ್ರೆಸ್‌ ಕೂಡಾ ಕೂಲ್‌

speaker Vs Khandre

#image_title

ಬೆಂಗಳೂರು: ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ವಿರುದ್ಧ ಒಂದು ಹಂತದಲ್ಲಿ ತೀವ್ರವಾಗಿ ಮುನಿಸಿಕೊಂಡು ಎಚ್ಚರಿಕೆ ನೀಡಿದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಬಳಿಕ ಶಾಂತರಾದ ಘಟನೆ ನಡೆದಿದೆ.

ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ನಂತೆ ಹೊಡೆದು ಹಾಕಬೇಕು ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದ ಸಚಿವ ಅಶ್ವತ್ಥ ನಾರಾಯಣ ಅವದು ಸದನದಲ್ಲೂ ತಮ್ಮ ಹೇಳಿಕೆಯನ್ನು ಸಮರ್ಥಿಸಲು ಆರಂಭಿಸಿದಾಗ ಕಾಂಗ್ರೆಸ್‌ ಶಾಸಕರು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿ ಮುಂಚೂಣಿಯಲ್ಲಿದ್ದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಸ್ಪೀಕರ್‌ ಎಚ್ಚರಿಕೆ ನೀಡಿದ್ದರು. ಆದರೆ, ಈಶ್ವರ ಖಂಡ್ರೆ ಇದನ್ನು ಕೇಳಿಸಿಕೊಳ್ಳದೆ ಜೋರಾಗಿಯೇ ಮಾತನಾಡಿದರು.

ಆಗ ಉದ್ವಿಗ್ನರಾಗಿ, ಭಾವುಕರಾಗಿ, ಸ್ವಲ್ಪ ಮಟ್ಟಿಗೆ ಆಕ್ರೋಶಿತರಾಗಿ ಪ್ರತಿಕ್ರಿಯಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ʻʻಸದನ ಅಂದ್ರೆ ಏನಂದುಕೊಂಡಿದ್ದೀರಿ? ಸದನದಿಂದ ಹೊರಗೆ ಹಾಕಬೇಕಾಗುತ್ತದೆ. ತಮಾಷೆ ಮಾಡ್ತಿದ್ದೀರಾ? ಕೂತ್ಕೊಳಿ, ಮಾತಾಡಬೇಡಿ? ನನ್ನ ಅಧಿಕಾರ ಪೂರ್ಣ ಪ್ರಮಾಣದಲ್ಲಿ ಚಲಾಯಿಸಲು ಅವಕಾಶ ಕೊಡಬೇಡಿ. ಸದನದಿಂದ ಹೊರಗೆ ಹಾಕಲಾ?ʼʼ ಎಂದು ಸಿಟ್ಟಾಗಿ ಮಾತನಾಡಿದರು ಸ್ಪೀಕರ್‌. ಸ್ಪೀಕರ್ ಮಾತಿಗೆ ಸಿಟ್ಟಿಗೆದ್ದ ಈಶ್ವರ ಖಂಡ್ರೆ ಸದನ ಬಾವಿಗಿಳಿದರು, ಅವರಿಗೆ ಕಾಂಗ್ರೆಸ್‌ ಶಾಸಕರು ಸಾಥ್‌ ನೀಡಿದರು.

ಈ ನಡುವೆ, ಈಶ್ವರ ಖಂಡ್ರೆ ಅವರ ನಡೆಯನ್ನು ಆಕ್ಷೇಪಿಸಿದ ಸ್ಪೀಕರ್‌ ಅವರು ಸಭೆಯನ್ನು ನಡೆಸಿದರು. ಅದರಲ್ಲಿ ಸ್ಪೀಕರ್‌, ಮಾಧುಸ್ವಾಮಿ, ಕೃಷ್ಣ ಭೈರೇಗೌಡ, ಖಾದರ್ ಮತ್ತಿತರರು ಭಾಗಿಯಾಗಿದ್ದರು. ಸಭೆಯ ಬಳಿಕ ಸದನದ ಕಲಾಪ ಮತ್ತೆ ಆರಂಭವಾಯಿತು. ಆಗಲೂ ಕಾಂಗ್ರೆಸ್‌ ಶಾಸಕರ ಪ್ರತಿಭಟನೆ ಮುಂದುವರಿಸಿದ್ದರು.

ಮರಳಿ ಸದನಕ್ಕೆ ಆಗಮಿಸಿದ ಸ್ಪೀಕರ್‌ ಕಾಗೇರಿ ಅವರು ಈಶ್ಚರ್ ಖಂಡ್ರೆ ಮತ್ತು ಕಾಂಗ್ರೆಸ್ ಸದಸ್ಯರನ್ನು ಸ್ಥಾನಕ್ಕೆ ಮರಳುವಂತೆ ಮನವಿ ಮಾಡಿದರು.

ʻʻನಿಮ್ಮ ಬಗ್ಗೆ, ಕ್ಷೇತ್ರದ ಜನರ ಬಗ್ಗೆ ನನಗೆ ಗೌರವವಿದೆ. ನಿಮ್ಮ ತಂದೆಯವರ ಜೊತೆ ಕೆಲಸ ಮಾಡಿದ್ದೇನೆ. ನಿಮ್ಮ ಮತ್ತು ನನ್ನ ನಡುವೆ ವೈಮನಸ್ಸು ಇಲ್ಲ. ಉದ್ರೇಕದ ಕ್ಷಣದಲ್ಲಿ ಮಾತನಾಡಿದ್ದೇನೆ. ಇದನ್ನು ಇಲ್ಲಿಗೆ ಮುಗಿಸೋಣʼʼ ಎಂದು ಸ್ಪೀಕರ್ ಕಾಗೇರಿ ಅವರು ಈಶ್ವರ್‌ ಖಂಡ್ರೆ ಅವರಲ್ಲಿ ಮನವಿ ಮಾಡಿದರು.

ʻʻಈಶ್ವರ್ ಖಂಡ್ರೆ ಅವರ ಮೇಲೆ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯ ಇಲ್ಲ. ನಾನು ಉದ್ವೇಗದಿಂದ ಮಾತನಾಡಿದ್ದೇನೆ. ನಾನು ನಿಮ್ಮ ತಂದೆಯವರ ಜತೆ ಕೆಲಸ ಮಾಡಿದ್ದೇನೆ. ಅ ವಿಶ್ವಾಸದ ಮೇಲೆ ನಿಮ್ಮ ಬಗ್ಗೆ ಆ ರೀತಿ ಮಾತನಾಡಿದ್ದೇನೆ. ಕಡತ ತರಿಸಿಕೊಂಡು ನೋಡಿ ಅದರಲ್ಲಿ ಕೆಲ ವಿಚಾರ ತೆಗೆಸುವ ಕೆಲಸ ಮಾಡ್ತೀನಿʼʼ ಎಂದರು. ಈ ಮಾತಿನ ಬಳಿಕ ಕಾಂಗ್ರೆಸ್‌ ಸದಸ್ಯರು ತಮ್ಮ ಪ್ರತಿಭಟನೆ ಹಿಂಪಡೆದರು.

ಇದಾದ ಬಳಿಕ ಸ್ಪೀಕರ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಈಶ್ವರ ಖಂಡ್ರೆ ಅವರು, ʻʻನನ್ನನ್ನು ಜನ ಗೆಲ್ಲಿಸಿ ಕಳುಹಿಸಿದ್ದಾರೆ. ನಮ್ಮ ಕ್ಷೇತ್ರದ ಜನ ಮೂರು ಲಕ್ಷ ಜನ ಮತ ಚಲಾಯಿಸಿದ್ದಾರೆ. ನಾನು ಅಗೌರವ ತೋರಿಸುವ ಕೆಲಸ ಮಾಡಿಲ್ಲ. ನೀವು ಯಾವುದೋ ಹಳೆಯದ್ದನ್ನ ಇಟ್ಟುಕೊಂಡು ಮಾತನಾಡಿದಂತೆ ಇತ್ತು. ಅದು ನನಗೆ ಬೇಸರವಾಯಿತುʼʼ ಎಂದು ಹೇಳಿದರು.

ʻʻನನ್ನ ಧ್ವನಿ ಸ್ವಲ್ಪ ದೊಡ್ಡದು. ನಾನು ಸಹಜವಾಗಿ ಮಾತನಾಡಿದ್ದು ನಿಮಗೆ ಸ್ವಲ್ಪ ಜೋರಾಗಿ ಕೇಳಿಸಿ ತಪ್ಪು ಅರ್ಥ ಬಂದಿರಹುದುʼʼ ಎಂದು ಸಮಾಧಾನ ಮಾಡಿದರು. ಅಲ್ಲಿಗೆ ವಿವಾದ ಕೊನೆಗೊಂಡಿತು.

ಇದನ್ನೂ ಓದಿ : ಹೊಡೆದು ಹಾಕಿ ಹೇಳಿಕೆಯನ್ನು ಸದನದಲ್ಲಿ ಸಮರ್ಥಿಸಿದ ಅಶ್ವತ್ಥ್‌ ನಾರಾಯಣ್‌; ಕಾಂಗ್ರೆಸ್‌ ಕೆಂಡಾಮಂಡಲ, ಭಾರಿ ಗದ್ದಲ

Exit mobile version