ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ಡಿಸೆಂಬರ್ ೧೯ರಿಂದ ೩೦ರವರೆಗೆ ವಿಧಾನ ಮಂಡಲ ಅಧಿವೇಶನ (Assembly session) ನಡೆಯಲಿದ್ದು, ಈ ವೇಳೆ ಆರು ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅಧಿವೇಶನಕ್ಕೆ ಮಾಡಬೇಕಾದ ಸಿದ್ಧತೆಗಳ ವಿಚಾರದಲ್ಲಿ ಸುವರ್ಣ ಸೌಧದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸ್ಪೀಕರ್ ಕಾಗೇರಿ ಅವರು ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು.
ಈ ಅಧಿವೇಶನದಲ್ಲಿ ಬೆಂಗಳೂರು ಭೂಸುಧಾರಣೆ ಕಾಯ್ದೆ, ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಅದರ ಬಗ್ಗೆ ಚರ್ಚೆ ನಡೆಯಲಿದೆ. ಗಡಿ ಪ್ರದೇಶ ಅಭಿವೃದ್ಧಿ ವಿಧೇಯಕ ಸೇರಿದಂತೆ ಆರು ಹೊಸ ವಿಧೇಯಕಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ ಮಾಡಲಾಗಿದೆ ಎಂದು ಕಾಗೇರಿ ತಿಳಿಸಿದರು.
ಹಾಜರಾತಿ ಕಡ್ಡಾಯ, ಹಗುರವಾಗಿ ಪರಿಗಣಿಸುವಂತಿಲ್ಲ
ಇದು ಉತ್ತರ ಕರ್ನಾಟಕದ ಪಾಲಿನ ಮಹತ್ವಾಕಾಂಕ್ಷೆಯ ಅಧಿವೇಶನ. ಜತೆಗೆ ಕೋಟ್ಯಂತರ ರೂ. ಖರ್ಚು ಮಾಡಿ ಇದನ್ನು ನಡೆಸಲಾಗುತ್ತಿದೆ. ಅಧಿವೇಶನವನ್ನು ಶಾಸಕರು ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಶಾಸಕರ, ಸಚಿವರ ಹಾಜರಾತಿ ಕಡ್ಡಾಯಕಗೊಳಿಸಲಾಗಿದೆ. ಅಧಿವೇಶನಕ್ಕೆ ಹೋಗಲ್ಲ, ಅಲ್ಲೇನಿದೆ ಎಂಬ ಶಾಸಕರು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು, ನಾನು ಅದನ್ನು ಸಹಿಸುವುದಿಲ್ಲ. ಚಳಿಗಾಲ ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರ ಹಾಜರಾತಿ ಕಡ್ಡಾಯವಾಗಿದೆ ಎಂದು ಕಾಗೇರಿ ಹೇಳಿದರು. ಒಂದೊಮ್ಮೆ ಆರೋಗ್ಯವೂ ಸೇರಿದಂತೆ ಮಹತ್ವದ ಕಾರಣಗಳಿಗಾಗಿ ಗೈರು ಹಾಜರಾಗುವುದಾದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ʻʻ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ವಿಶೇಷ ಆದ್ಯತೆ ನೀಡಲಾಗುವುದು. ಈ ಸಲವೂ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದೇವೆ. ಪ್ರಶಸ್ತಿ ಪ್ರದಾನ ದಿನಾಂಕ, ಶಾಸಕರ ಹೆಸರು ಇನ್ನೂ ಅಂತಿಮವಾಗಿಲ್ಲʼʼ ಎಂದು ತಿಳಿಸಿದರು.
ʻʻಅಚ್ಚುಕಟ್ಟಾಗಿ ಅಧಿವೇಶನ ನಡೆಸಲು ಸೂಚನೆ ನೀಡಲಾಗಿದೆ. ಸಚಿವರು-ಶಾಸಕರು, ಅಧಿಕಾರಿಗಳ ವಸತಿ, ಊಟ, ವಾಹನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲು ಸೂಚಿಸಿರುವೆ. ಬೆಳಗಾವಿಯಲ್ಲಿ ಈ ಸರ್ಕಾರದ ಕೊನೆಯ ಅಧಿವೇಶನವಾಗಿರುವುದರಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಉಭಯ ಸದನದ ಕಲಾಪಗಳು ಮುಕ್ತವಾಗಿ ನಡೆಯಲಿವೆʼʼ ಎಂದು ಹೇಳಿದ ಸ್ಪೀಕರ್, ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | ವಿಧಾನಸಭೆಯ 13ನೇ ಅಧಿವೇಶನ ಯಶಸ್ವಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ