Site icon Vistara News

Assembly Session: ಅಧಿವೇಶನದಲ್ಲಿ ಹಗರಣಗಳ ಸದ್ದು; ಮೊದಲ ದಿನವೇ ಮುಗಿಬಿದ್ದ ವಿಪಕ್ಷ ನಾಯಕರು, ಹೆದರಲ್ಲ ಎಂದ ಸಿಎಂ!

Assembly Session

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Assembly Session) ಮೊದಲ ದಿನವೇ ವಾಲ್ಮೀಕಿ ನಿಗಮ, ಮುಡಾ ಹಗರಣಗಳ ಸದ್ದು ಜೋರಾಗಿ ಕೇಳಿಬಂದಿದೆ. ಅಕ್ರಮಗಳನ್ನು ಉಲ್ಲೇಖಿಸಿ ಎರಡೂ ಸದನಗಳಲ್ಲೂ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ ಬಿಜೆಪಿ ನಾಯಕರು ಮುಗಿಬಿದ್ದರು. ಇನ್ನು ವಿಧಾನ ಪರಿಷತ್‌ ಕಲಾಪದ ವೇಳೆ ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ನಾವು ಯಾವತ್ತೂ ಹೆದರಿಕೊಳ್ಳುವುದರಿಲ್ಲ: ಸಿಎಂ

ನಾವು ಯಾವತ್ತೂ ಕೂಡ ಚರ್ಚೆ ಮಾಡಲು ಹೆದರಿಕೊಳ್ಳುವುದರಿಲ್ಲ. ನಮ್ಮ ಮೇಲೆ ಆರೋಪ ಮಾಡುತ್ತಿರುವ ನೀವು, ನಿಮ್ಮ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್. ವೀರಯ್ಯ ಬಂದನದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಾವು ವಾಲ್ಮೀಕಿ ನಿಗಮ ಪ್ರಕರಣ ಅಥವಾ ಇನ್ನಾವುದೇ ಪ್ರಕರಣದ ಬಗ್ಗೆ ಚರ್ಚೆ ಮಾಡಲು ತಯಾರಿದ್ದೇವೆ. ನೀವು ಚರ್ಚಗೆ ಅವಕಾಶ ಕೊಡದಿದ್ದರೆ ನಮಗೂ ಗಲಾಟೆ ಬರುತ್ತದೆ. ವಿರೋಧ ಪಕ್ಷದವರು ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ನಿಯಮಾವಳಿ ಪ್ರಕಾರ ಅಧಿವೇಶನ ನಡೆಯಲು ಬಿಡಿ ಎಂದು ಆಗ್ರಹಿಸಿದರು.

ಇವರಿಗೆ ಜನರ ಹಣದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಇವರ ಕಾಲದಲ್ಲಿ ಜನರ ದುಡ್ಡು ಲೂಟಿ ಹೊಡೆದಿದ್ದಾರೆ. ನಿಯಮಾವಳಿ ಪ್ರಕಾರ ಚರ್ಚೆ ಮಾಡಲು ಅವಕಾಶ ನೀಡಬೇಕು. ಇವರು ಅಧಿಕಾರಿದಲ್ಲಿದ್ದಾಗ ಮಾಡಿದ ಕೆಲಸಗಳನ್ನು ನೋಡಿ, ಈಗ ಅವರನ್ನು ವಿಪಕ್ಷ ಸ್ಥಾನದಲ್ಲಿ ಜನ ಕೂರಿಸಿದ್ದಾರೆ. ನಾವು ಯಾವತ್ತೂ ಚರ್ಚೆ ಮಾಡಲು ಹೆದರಲ್ಲ ಎಂದು ಹೇಳಿದರು.

‌ವಾಲ್ಮೀಕಿ ನಿಗಮ ಅಕ್ರಮದಲ್ಲಿ ಸಚಿವರು, ಅಧ್ಯಕ್ಷರು ಭಾಗಿಯಾಗಿರೋದು ಸ್ಪಷ್ಟ: ಅಶೋಕ್

ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವರು ಮತ್ತು ಅಧ್ಯಕ್ಷರು ಭಾಗಿಯಾಗಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಕಾನೂನು ಬಾಹಿರವಾಗಿ ಕೋಟ್ಯಂತರ ಹಣ ವರ್ಗಾವಣೆ ಆಗಿದೆ. ನಿಗಮದಲ್ಲಿ ನಾಗೇಂದ್ರ ಪಿಎ ನೆಕ್ಕುಂಡಿ ನಾಗರಾಜ್ ಏನು ಹೇಳಿದ್ದನೋ ಅದರಂತೆ ನಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರ ಆಣತಿಯಂತೆ ಎಲ್ಲವೂ ಆಗಿದೆ. ಕಳ್ಳನೇ ಹೋಗಿ ದೂರು ಕೊಟ್ಟಂತೆ ಎಂ.ಡಿ. ಪದ್ಮನಾಭ್‌ ಹೋಗಿ ದೂರು ಕೊಡುತ್ತಾರೆ. ಬಳಿಕ ಬಸವರಾಜ ದದ್ದಲ್‌ಗೂ ದೂರು ಹೋಗುತ್ತೆ ಎಂದು ಆರೋಪಿಸಿದರು.

ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರದ್ದು ಆತ್ಮಹತ್ಯೆ ಅಲ್ಲ, ಸರ್ಕಾರದ ಪ್ರಾಯೋಜಕತ್ವದ ಕೊಲೆ. ದಲಿತ ಅಧಿಕಾರಿಯ ಕೊಲೆಯಾಗಿದೆ. ಒತ್ತಡಕ್ಕೆ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಲಿಯಾದ ಜೀವಿಗೆ ಬೆಲೆ ಇಲ್ಲವಾ? ಸರ್ಕಾರಕ್ಕೆ ಹೃದಯ, ಕಿವಿ ಇಲ್ಲವಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳೇ ನೀವು ಇದನ್ನು ಹಗರಣ ಅಲ್ಲ ಅಂತ ಹೇಳಲು ಸಾಧ್ಯವಿಲ್ಲ. ಇದರ ಶಾಪ ನಿಮಗೆ ತಟ್ಟಲ್ಲವೇ?ಇಡಿ, ಸಿಬಿಐ, ಎಸ್ಐಟಿಯಲ್ಲಿ ಅಮಾಯಕರ ದುಡ್ಡು ತಿಂದಿರುವ ಬಗ್ಗೆ ಮಾಹಿತಿ ಇಲ್ಲ. ಡಿ.ಕೆ. ಶಿವಕುಮಾರ್ ಅವರು ಪ್ರಕರಣ ಬಯಲಿಗೆ ಬಂದ ತಕ್ಷಣ ಮಾಧ್ಯಮದವರಿಗೆ ಸಂದರ್ಶನ ಕೊಡಲಿಲ್ಲ. ಪೊಲೀಸರಿಗೆ ಸಂದೇಶ ರವಾನೆ ಮಾಡಿದರು. ಬಾಂಬ್ ಬ್ಲಾಸ್ಟ್ ಮಾಡಿದಾಗ ನನ್ನ ಸಹೋದರರು ಎಂದರು. ಈಗಲೂ ನಾಗೇಂದ್ರ ವಿಚಾರದಲ್ಲೂ ಅದನ್ನೇ ಹೇಳಿದ್ದಾರೆ. ಸಿಎಂ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಸರ್ಕಾರದಲ್ಲಿ ಸಿಎಂ ಒಂದು, ಡಿಸಿಎಂ ಒಂದು ಹೇಳಿಕೆ ಕೊಡುತ್ತಿದ್ದಾರೆ. ಅವರ ಸರ್ಕಾರದಲ್ಲೇ ವಿಭಿನ್ನ ಹೇಳಿಕೆಗಳು ಬರುತ್ತಿವೆ ಎಂದು ಟೀಕಿಸಿದರು.

ಇದನ್ನೂ ಓದಿ | Valmiki Corp scam: ವಾಲ್ಮೀಕಿ ನಿಗಮ ಅಕ್ರಮದಲ್ಲಿ ನನ್ನ ಪಾತ್ರ ಇಲ್ಲ; ಸಿಎಂ ಮುಂದೆ ಶಾಸಕ ದದ್ದಲ್ ಕಣ್ಣೀರು

ಎಸ್ಐಟಿ ತನಿಖೆ ಮಾಡಿಸುವ ನಾಟಕವಾಡಿ ಪ್ರಕರಣವನ್ನು ಹಳ್ಳ ಹಿಡಿಸುವುದು ಬೇಡ, ಈ ಸರ್ಕಾರ ಉತ್ತರ ಕೊಡಬೇಕು. ನಾವು ಭ್ರಷ್ಟಾಚಾರದ ವಿರುದ್ಧ ಅನ್ನೋದು ಕೇವಲ ಭಾಷಣಕ್ಕೆ ಸಿಮೀತವಾಗಬಾರದು. ಏರ್ಪೋರ್ಟ್ ಬಳಿ ಇರುವ ಒಂದು ಹೋಟೆಲ್‌ನಲ್ಲಿ ನಾಗೇಂದ್ರ ಹಾಗೂ ಎಲ್ಲರೂ ಸೇರ್ತಾರೆ. ನಾನು ಹೊರಗಡೆ ಇದ್ದರೆ ನಿಮ್ಮನ್ನು ಬಚಾವ್ ಮಾಡುತ್ತೀನಿ, ಹೀಗಾಗಿ ಯಾರು ಸಹ ನನ್ನ ಹೆಸರು ಹೇಳಬೇಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದು ಒಪನ್ ಮೀಟಿಂಗ್ ಟಾಕ್, ಇದಕಿಂತಲೂ ಸಾಕ್ಷಿ ಬೇಕಾ ಎಂದು ಅಶೋಕ್‌ ಹೇಳಿದರು.

Exit mobile version