ಧಾರವಾಡ: ಭೂಸ್ವಾಧೀನಪಡಿಸಿಕೊಂಡು ರೈತ ಮಹಿಳೆಗೆ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ಧಾರವಾಡ ಉಪವಿಭಾಗಾಧಿಕಾರಿಗಳ ಸರ್ಕಾರಿ ವಾಹನವನ್ನು ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಜಪ್ತಿ ಮಾಡಲಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗವ್ವ ಲಲಿತಾ ಕೇರಿ ಎಂಬುವವರ 2 ಎಕರೆ 30 ಗುಂಟೆ ಜಮೀನನ್ನು ಉಪವಿಭಾಗಾಧಿಕಾರಿಗಳ ಕಚೇರಿ ಭೂಸ್ವಾಧೀನಪಡಿಸಿಕೊಂಡಿತ್ತು. ಆಗ ಆ ರೈತ ಮಹಿಳೆಗೆ ಕೇವಲ ₹35 ಲಕ್ಷ ಪರಿಹಾರ ಮಾತ್ರ ನೀಡಲಾಗಿತ್ತು. ಕಡಿಮೆ ಪರಿಹಾರ ನೀಡಿದ್ದನ್ನು ಪ್ರಶ್ನಿಸಿ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಕೂಡ ಜಮೀನು ಮಾಲೀಕರಿಗೆ ₹1.73 ಕೋಟಿ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶವಿದ್ದರೂ, ಜಮೀನು ಮಾಲೀಕರಿಗೆ 9 ತಿಂಗಳು ಕಳೆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಎರಡನೇ ಅಪರ ಜಿಲ್ಲಾ ನ್ಯಾಯಾಲಯವು ಉಪವಿಭಾಗಧಿಕಾರಿಗಳ ಸರ್ಕಾರಿ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಉಪವಿಭಾಗಾಧಿಕಾರಿಗಳ ವಾಹನವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ | ನಿಮ್ಮದೇ ಗಾಡಿ ನಂಬರ್ ಇರೋ ಬೇರೆ ವಾಹನ ಇವೆಯೆ? ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ ಎಚ್ಚರ!