ಬೆಂಗಳೂರು: ಭಾರತ-ಅಫಘಾನಿಸ್ತಾನ ನಡುವೆ ನಾಳೆ(ಬುಧವಾರ) ಮೂರನೇ ಹಾಗೂ ಅಂತಿಮ ಟಿ20(IND vs AFG 3rd T20) ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ನಡೆಯಲಿದೆ. ಹೀಗಾಗಿ ಸ್ಟೇಡಿಯಂ ಸುತ್ತಾಮುತ್ತಾ ಭದ್ರತೆ ಕೈಗೊಂಡಿದ್ದು, ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?
ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ನಡೆಯುವ ಬುಧವಾರದಂದು ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೇಂಟ್ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ಬಾ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ
ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣ ಮೊದಲ ಮಹಡಿ, ಕಿಂಗ್ಸ್ ರಸ್ತೆ, ಯುಬಿ ಸಿಟಿಯಲ್ಲಿ ಸ್ಥಳ ಲಭ್ಯತೆ ಮೇಲೆ ಹಣ ಪಾವತಿಸಿ ವಾಹನ ನಿಲುಗಡೆ ಮಾಡಬಹುದು. ಆದರೆ ಪಂದ್ಯ ವೀಕ್ಷಣೆಗೆ ಬರುವವರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶವಿದೆ. ಇನ್ನುಳಿದವರಿಗೆ ಪಾರ್ಕಿಂಗ್ ನಿರ್ಬಂಧಿಸಲಾಗಿದೆ. ಇನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆ ಬಳಸದಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ IND vs AFG 3rd T20: ಮೂರನೇ ಟಿ20ಗೆ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ
Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024
ಪಿಚ್ ರಿಪೋರ್ಟ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ಒಂಬತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಚೇಸಿಂಗ್ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. 5 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದರೆ, 3 ಬಾರಿ ಮಾತ್ರ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಶಾಲಿಯಾಗಿದೆ. ರಾತ್ರಿಯ ವೇಳೆ ಇಬ್ಬನಿಯ ಕಾಟ ಇರುವ ಕಾರಣ ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬಹುದು.
ಪಂದ್ಯಕ್ಕೆ ಮಳೆ ಭೀತಿ ಇಲ್ಲ
ಅಂತಿಮ ಟಿ20 ಪಂದ್ಯ ನಡೆಯುವ ಬೆಂಗಳೂರಿನಲ್ಲಿ ಹವಾಮಾನ ವರದಿಯ ಮುನ್ಸೂಚನೆಗಳ ಪ್ರಕಾರ, ಬುಧವಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು ಯಾವುದೇ ಮಳೆಯ ಕಾಟ ಇಲ್ಲ ಎಂದು ತಿಳಿಸಿದೆ. ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಚಳಿಯ ವಾತಾವರಣ ಇರುವ ಕಾರಣ ಇಬ್ಬನಿ ಸಮಸ್ಯೆ ಕೊಂಚ ಅಧಿಕವಾಗಿರಲಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ವಾಷಿಂಗ್ಟನ್ ಸುಂದರ್.
ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.