Site icon Vistara News

Attibele Fire Accident : ಕಾಪಾಡಿ ಎಂದು ಕೂಗಿಟ್ಟರೂ ಪಟಾಕಿ ಕೋಟೆಯಿಂದ ಹೊರ ಬರಲಾಗದೇ ಸುಟ್ಟು ಹೋದರು!

Attiebele Fire Accident

ಆನೇಕಲ್‌: ಅತ್ತಿಬೆಲೆ ಪಟಾಕಿ ದುರಂತದಲ್ಲಿ (Attibele Fire Accident) 14 ಮಂದಿ ಸಜೀವ ದಹನವಾಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಮುಂದುವರಿದಿದೆ. ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದ ಕಾರಣವನ್ನು ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಈ ನಡುವೆ ಅವಘಡದಲ್ಲಿ ಪ್ರಾಣಾಪಾಯದಿಂದ ಪಾರಾದವರು ಘಟನೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅತ್ತಿಬೆಲೆ ಬಾರ್ಡರ್ ಬಳಿ ಇರುವ ಶ್ರೀಬಾಲಾಜಿ ಟ್ರೇಡರ್ಸ್‌ ಮಾಲೀಕ ನವೀನ್‌ ರೆಡ್ಡಿ ಅನತಿ ಮೇರೆಗೆ ಸೇಲ್ಸ್ ಮ್ಯಾನ್ ಕೆಲಸಕ್ಕೆ ಬಂದಿದ್ದರು. ವಾಣಿಯಾಂಬಾಡಿಯಿಂದ 12 ಮಂದಿ, ಕಲ್ಲಕುರ್ಚಿಯಿಂದ 15 ಮಂದಿ ಜತೆಗೆ 9 ಮಂದಿ ಬಂದು ಕೆಲಸ ಮಾಡುತ್ತಿದ್ದರು. ಇವರೆಲ್ಲರು ಉಳಿದುಕೊಳ್ಳಲು ಪಟಾಕಿ ಅಂಗಡಿಯ ಮುಂಭಾಗವೇ ರೂಂವೊಂದನ್ನು ಮಾಡಿಕೊಟ್ಟಿದ್ದರು. ಸೇಲ್ಸ್ ಪರ್ಸನ್‌ಗೆ ಪ್ರತಿ ದಿನ 600 ರಿಂದ 700 ರೂಪಾಯಿ ಸಂಬಳ ನೀಡುತ್ತಿದ್ದರು.

ಹೀಗಿದ್ದಾಗ ಕಳೆದ 7ರ ಶನಿವಾರ ಎಂದಿನಂತೆ ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ ಊಟ ಮುಗಿಸಿ ವಾಪಸ್‌ ಬಂದಾಗ ಕಂಟೈನರ್ ಲಾರಿಯಲ್ಲಿ ಪಟಾಕಿ ಲೋಡ್ ಬಂದಿತ್ತು. ಹೀಗಾಗಿ ಪಟಾಕಿ ಬಾಕ್ಸ್‌ಗಳನ್ನು ಇಳಿಸುವಂತೆ ಪಟಾಕಿ ಅಂಗಡಿ ಮಾಲೀಕ ತಿಳಿಸಿದ್ದ. ಅದರಂತೆ ಕಂಟೈನರ್‌ನಲ್ಲಿದ್ದ ಪಟಾಕಿ ಬಾಕ್ಸ್‌ಗಳನ್ನು ಅಂಗಡಿಯೊಳಗೆ ತೆಗೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ 120 ವಾರ್ಟ್ಸ್, 220 ರಾರ್ಟ್ಸ್‌ನ ಪಟಾಕಿ ಬಾಕ್ಸ್‌ಗಳಿಂದ ಸ್ಪರ್ಕ್ ಬಂದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೆಚ್ಚಾಗಿತ್ತು.

ಇದನ್ನೂ ಓದಿ: Attibele Fire Accident : ಪಟಾಕಿ ದುರಂತ ನಡೆಯದಂತೆ ಸರ್ಕಾರದಿಂದ ನೀತಿ: ಡಿ.ಕೆ. ಶಿವಕುಮಾರ್

ಇದನ್ನು ಕಂಡ ಕೂಡಲೇ ಕ್ಯಾಶ್‌ ಕೌಂಟರ್‌ನ ಬಳಿ ಇದ್ದ ಮಾಲೀಕ ನವೀನ್‌ ರೆಡ್ಡಿ ಕೂಡಲೇ ಓಡಿ ಹೋಗಿದ್ದರು. ಈ ವೇಳೆ ನವೀನ್‌ ರೆಡ್ಡಿಗೂ ಬೆಂಕಿ ತಗುಲಿ ಸ್ವಲ್ಪ ಕೈಗೆ ಏಟಾಗಿತ್ತು. ಹಿಂಭಾಗ ಕೆಲಸ ಮಾಡುತ್ತಿದ್ದ ಕೆಲ ಹೆಂಗಸರು ಪಟಾಕಿ ಶಬ್ಧಕ್ಕೆ ಕೇಳಿ ಓಡಿ ಹೋಗಿದ್ದರು. ಇತ್ತ ಗೋದಾಮಿನೊಳಗೆ ಇದ್ದವರು ಹೊರಗೆ ಬರಲು ಆಗದೆ ರಕ್ಷಿಸುವಂತೆ ಕೂಗಾಡಿದ್ದಾರೆ. ಆದರೆ ಪಟಾಕಿ ಬಾಕ್ಸ್‌ಗಳನ್ನು ಅಡ್ಡದಿಡ್ಡಿಯಾಗಿ ಇಟ್ಟಿದ್ದರಿಂದ ಓಡಿ ಹೋಗಲು ಸಾಧ್ಯವಾಗಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು, ಅಂಗಡಿಯೊಳಗೆ ಸಿಲುಕಿದ್ದ ನಾಲ್ವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇತ್ತ ಪಟಾಕಿ ಎಲ್ಲವೂ ಒಮ್ಮೆಲೆ ಸಿಡಿದ ಕಾರಣಕ್ಕೆ ಪಟಾಕಿ ಅಂಗಡಿಯೊಳಗೆ ಇದ್ದವರು ಸುಟ್ಟುಹೋಗಿದ್ದಾರೆ. ಅಂಗಡಿ ಮುಂಭಾಗದಲ್ಲಿದ್ದ ಕಂಟೈನರ್ ಲಾರಿ, ಟಾಟಾ ಏಸ್‌, ಇನ್ನೊಂದು ಗೂಡ್ಸ್‌ ಗಾಡಿ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿ ಸುಟ್ಟುಹೋಗಿವೆ.

ಐವರ ವಿರುದ್ಧ ದೂರು ದಾಖಲು

ಪ್ರಕರಣ ಸಂಬಂಧ ಐವರ ವಿರುದ್ಧ ದಾಖಲಾಗಿದೆ. ಘಟನೆಗೆ ಅಂಗಡಿಯ ಮಾಲೀಕ ರಾಮಸ್ವಾಮಿರೆಡ್ಡಿ, ನವೀನ್‌ ರೆಡ್ಡಿ, ಮ್ಯಾನೇಜರ್ ಲೋಕೇಶ್‌ ಕಾರಣವೆಂದು ಉಲ್ಲೇಖಿಸಿದ್ದಾರೆ. ಈ ರೀತಿ ಸ್ಫೋಟ ಆಗುವ ಸಾಧ್ಯತೆ ಇದೆ ಎಂದು ಗೊತ್ತಿದ್ದರೂ ಸಹ ನಮಗೆ ಸರಿಯಾದ ತರಬೇತಿ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಬೆಂಕಿ ನಂದಿಸುವ ಯಾವುದೆ ಉಪಕರಣಗಳನ್ನು ಇಟ್ಟಿಲ್ಲ. ಗೋಡನ್‌ನಿಂದ ತುರ್ತಾಗಿ ಹೊರಗಡೆ ಓಡಿ ಹೋಗುವಂತಹ ಬಾಗಿಲುಗಳನ್ನು ಹಾಕಿಸಿಲ್ಲ. ಈ ಕಾರಣದಿಂದಲೇ ಅನಾಹುತ ನಡೆದು ಕಾರ್ಮಿಕರ ಸಾವಿಗೆ ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version