ಆನೇಕಲ್: ಪಟಾಕಿ ಮಾರಾಟಕ್ಕೆ ಅನುಮತಿ ಪಡೆದು ಬಳಿಕ ಗೋಡೌನ್ ಮಾಡಿಕೊಂಡಿದ್ದ ಪಟಾಕಿ ಮಾರಾಟಗಾರರು (Attibele Fire Accident) ಕಾಲ್ಕಿತ್ತಿದ್ದಾರೆ. ಅತ್ತಿಬೆಲೆ ಪಟಾಕಿ ದುರಂತ ನಡೆದ ಬೆನ್ನಲ್ಲೆ ಬಾಲಾಜಿ ಟ್ರೇಡರ್ಸ್ ಅಕ್ಕ ಪಕ್ಕದ ಇತರೆ ಮಳಿಗೆಗಳು ಬಂದ್ ಆಗಿವೆ.
ಅನಧಿಕೃತ ಪಟಾಕಿ ಗೋಡೌನ್ ಮಾರಾಟಗಾರು ಮಳಿಗೆಯ ಮುಂದಿದ್ದ ಬ್ಯಾನರ್ ತೆರವು ಮಾಡಿ ಅಂಗಡಿ ಕ್ಲೋಸ್ ಮಾಡಿದ್ದಾರೆ. ಜತೆಗೆ ಸಂಗ್ರಹಿಸಿಟ್ಟಿದ್ದ ಪಟಾಕಿಯನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಣಾ ತಂಡ
ಅತ್ತಿಬೆಲೆ ಪಟಾಕಿ ದುರಂತ ಹೇಗಾಯಿತು ಎಂದು ತಿಳಿಯಲು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಚೀಫ್ ಎಕ್ಸುಟೀವ್ ಅಧಿಕಾರಿ ಗಿರೀಶ್ ತಂಡದವರು ವರದಿಯನ್ನು ಸಿದ್ಧ ಪಡಿಸಲಿದ್ದಾರೆ. ಪಟಾಕಿ ಅಂಗಡಿಗಳ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿವೆ. ಹೀಗಾಗಿ ಇದರ ಅಂತರ ಎಷ್ಟಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಐಡಿ ಅಧಿಕಾರಿ ವೆಂಕಟೇಶ್ ಕೂಡ ಭೇಟಿ ನೀಡಿದ್ದು, ಘಟನಾ ಸ್ಥಳದ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗೋದಾಮು ನೆಲಸಮ
ತಮಿಳುನಾಡಿನ ಶಿವಕಾಶಿಯಿಂದ ಲೋಡ್ ಆಗಿ ಬಂದಿದ್ದ ಪಟಾಕಿಯನ್ನು ಅತ್ತಿಬೆಲೆಯ ಬಾಲಾಜಿ ಕ್ರಾಕರ್ಸ್ ಬಳಿ ಅನ್‌ಲೋಡ್ ಮಾಡಲು ನಿಲ್ಲಿಸಲಾಗಿತ್ತು. ಪಟಾಕಿ ಇದ್ದ ಕಂಟೈನರ್ ವಾಹನದ ಪಕ್ಕದಲ್ಲೆ ವಿದ್ಯುತ್ ಕನೆಕ್ಷನ್ ವಯರ್ ಹಾದುಹೋಗಿತ್ತು. ನಿಂತಿದ್ದ ಕಂಟೈನರ್ ಲಾರಿಗೆ ವಿದ್ಯುತ್ ಸ್ಪಾರ್ಕ್ ಆಗಿ ಕಿಡಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ಐದಾರು ಜೆಸಿಬಿಗಳ ಮೂಲಕ ಬೆಂಕಿ ಬಿದ್ದ ಗೋದಾಮು ಮಳಿಗೆಯನ್ನು ನೆಲಸಮ ಮಾಡಲಾಗಿದೆ. ಸುಟ್ಟ ಕರಕಲಾದ ಕ್ಯಾಂಟರ್ ವಾಹನ, ಕಬ್ಬಿಣದ ತಗಡಿನ ಶೀಟ್ ರಾಶಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ