ತುಮಕೂರು: ʻʻತುಮಕೂರು ನಗರಕ್ಕೆ ಮುಂದಿನ ಎಮ್ ಎಲ್ ಎ ನಾನೇʼʼ- ಹೀಗೇಂದು ಸ್ವಯಂಘೋಷಣೆ ಮಾಡಿಕೊಂಡಿದ್ದಾರೆ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು. ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ. ಪಕ್ಷ ಇನ್ನೂ ಟಿಕೆಟ್ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅದರ ನಡುವೆಯೇ ತುಮಕೂರಿಗೆ ಭೇಟಿ ನೀಡಿದ ಅಟ್ಟಿಕಾ ಬಾಬು ಅವರು ತಾನೇ ಎಂಎಲ್‌ಎ ಎಂದು ಘೋಷಿಸಿದ್ದಾರೆ.
ಬೊಮ್ಮನಹಳ್ಳಿ ಬಾಬು ಎಂಬ ಮೂಲ ಹೆಸರಿನ ಬಾಬು ಅವರು ಈಗ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕರಾಗಿ ಅಟ್ಟಿಕಾ ಬಾಬು ಎಂದೇ ಖ್ಯಾತರು. ಸಾಕಷ್ಟು ಸಾರ್ವಜನಿಕ ಸೇವೆಗಳ ಮೂಲಕ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಕೌಟುಂಬಿಕವಾದ ಕೆಲವು ಜಗಳಗಳಿಂದಲೂ ಅವರು ಸುದ್ದಿಯಲ್ಲಿದ್ದರು.
ದೇವಸ್ಥಾನದಲ್ಲಿ ಪೂಜೆ, ಪ್ರಚಾರ ಆರಂಭ!
ಅಟ್ಟಿಕಾ ಬಾಬು ಅವರು ದೇವರಾಯಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತ ಪ್ರಚಾರವನ್ನೇ ಅರಂಭಿಸಿದ್ದಾರೆ. ಈ ಪ್ರಚಾರ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ ಹಿಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭ ಮಾಡಿದ್ದು ವಿಶೇಷವಾಗಿತ್ತು.
ಜಮೀರ್, ಕಾಂಗ್ರೆಸ್ ನಾಯಕರ ಬೆಂಬಲವಿದೆ
ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದ ಅಟ್ಟಿಕಾ ಬಾಬುಗೆ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಅವರು ೨೦೨೩ರ ಚುನಾವಣೆಯಲ್ಲಿ ನಾನು ಎಂಎಲ್‌ಎ ಆಗ್ತೀನಿ ಅಂತ ಘೋಷಿಸಿಕೊಂಡಿದ್ದರು. ಈಗ ಟಿಕೆಟ್ ಸಿಗುವ ಮೊದಲೇ ನಾನೇ ಎಂಎಲ್‌ಎ ಅಂದಿದ್ದಾರೆ.
ʻʻಕಾಂಗ್ರೆಸ್‌ನಿಂದ ಟಿಕೆಟ್ ಗೆ ಅರ್ಜಿ ಹಾಕಿದ್ದೇನೆ. ಟಿಕೆಟ್ ಸಿಗುತ್ತದೆ…ನಾನೇ ಎಮ್‌ಎಲ್ಎ ಆಗ್ತೀನಿ. ಜಮೀರ್ ಅಹಮ್ಮದ್ ಖಾನ್ ಬೆಂಬಲ ನನಗಿದೆ. ಹಲವಾರು ಕಾಂಗ್ರೆಸ್ ನಾಯಕರು ನನ್ನ ಸಹಾಯಕ್ಕೆ ನಿಂತಿದ್ದಾರೆʼʼ ಎಂದು ಅಟ್ಟಿಕಾ ಬಾಬು ಹೇಳಿದ್ದಾರೆ.
ಇದನ್ನೂ ಓದಿ | ಡಿಕೆಶಿಗೆ ದುಬೈ, ಲಂಡನ್ ನಲ್ಲೂ ಮನೆ! ಅಕ್ರಮ ಆಸ್ತಿ ಸೂಚಿಸುವ ಆಡಿಯೊ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ