ಬೆಂಗಳೂರು: ಪುಸ್ತಕೋದ್ಯಮಕ್ಕೆ ತಮಿಳುನಾಡು ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದ್ದು, ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕ ಪೊನ್ ವಾಸುದೇವನ್ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನದಿಂದ (Bahuroopi Prakashana) ನಗರದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕೋದ್ಯಮ ಇಂದು ಆತಂಕವನ್ನು ಎದುರಿಸುತ್ತಿದೆ. ನಾಳಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಸರ್ಕಾರ ಪ್ರಕಾಶನ ರಂಗಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.
ಡಿಎಂಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪುಸ್ತಕ ಮೇಳಗಳು ಹಾಗೂ ಕೈಗೆತ್ತಿಕೊಂಡಿರುವ ಹಲವು ರೀತಿಯ ಸಗಟು ಖರೀದಿ ಯೋಜನೆಗಳು ಪುಸ್ತಕೋದ್ಯಮ ಉಸಿರಾಡುವಂತೆ ಮಾಡಿದೆ. ಓದುವ ಸಂಸ್ಕೃತಿಯನ್ನು ಯಾವೆಲ್ಲ ರಾಜ್ಯಗಳು ರಕ್ಷಿಸಿವೆಯೋ ಅಲ್ಲೆಲ್ಲ ಪುಸ್ತಕ ಉದ್ಯಮ ಸಂಪನ್ನವಾಗಿದೆ. ಹಾಗಾಗಿ ಓದುವ ಸಂಸ್ಕೃತಿಯನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕಾದ ಹೊಣೆ ಎಲ್ಲರದ್ದು ಎಂದು ತಿಳಿಸಿದರು.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
ಕಾರ್ಯಕ್ರಮದಲ್ಲಿ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೆ.ನಲ್ಲತಂಬಿ ಅವರನ್ನು ‘ಬಹುರೂಪಿ’ ಸನ್ಮಾನಿಸಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪುಸ್ತಕ ಎನ್ನುವುದು ಅರಿವಿನ ಭಾಗ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಓದುವ ಹವ್ಯಾಸ ಎಲ್ಲೆಡೆಯೂ ಪಸರಿಸಬೇಕಿದೆ. ಸಾಹಿತ್ಯದ ಸಹವಾಸ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಸಿದರು.
ಸಂವಾದದಲ್ಲಿ ಬಹುರೂಪಿಯ ಸಂಸ್ಥಾಪಕ ಜಿ.ಎನ್. ಮೋಹನ್, ಶ್ರೀಜಾ ವಿ.ಎನ್, ಕಲಾವಿದರಾದ ಗುಜ್ಜಾರ್, ಆರ್. ಸೂರಿ, ಸಾಹಿತಿ ರಂಜನಿ ಪ್ರಭು, ಸಂಸ್ಕೃತಿ ಚಿಂತಕ ಜಿ.ಎನ್. ನಾಗರಾಜ್ ಭಾಗಿಯಾಗಿದ್ದರು.