ಬೆಂಗಳೂರು: ಮುಸ್ಲಿಮರ ಹೊರತಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಅಸಾಧ್ಯ ಎಂದು ನಂಬಿದ್ದ ಗಾಂಧೀಜಿಯವರ ಕಾರಣಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟ, ತರಕಾರಿ ಖರೀದಿ ನಡೆಸುವ ರೀತಿಯಲ್ಲಿ ಚೌಕಾಸಿಯ ಮಟ್ಟಕ್ಕೆ ಇಳಿಯಿತು ಎಂದು ಚಿಂತಕ ಹಾಗೂ ಲೇಖಕ ರಾಮ್ ಮಾಧವ್ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದಿಶಾ ಭಾರತ್ ಸಂಸ್ಥೆಯ ನನ್ನ ಭಾರತ (My Bharat) ಅಭಿಯಾನದ ಭಾಗವಾಗಿ ಜಯನಗರದ ಜೈನ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ದೇಶ ವಿಭಜನೆಯ ದುರಂತ ಕಥೆಗಳು (1947 : Remembering Tragic story of Partition) ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ವಿಭಜನೆ ಶಾಂತಿಯುತವಾಗಿರಲಿಲ್ಲ, ಅದರಿಂದ ರಾತ್ರೋರಾತ್ರಿ ನಮ್ಮದೇ ದೇಶದ ಜನರು ಪರಕೀಯರಾದರು. ಆ ವೇಳೆ ಸುಮಾರು 3 ಲಕ್ಷ ಅಮಾಯಕರು ಪ್ರಾಣ ಕಳೆದುಕೊಂಡರು. ದೇಶ ವಿಭಜನೆಗೂ ಮುನ್ನವೇ ಈ ಕುರಿತು ಅನೇಕರು ಎಚ್ಚರಿಕೆ ನೀಡಿದ್ದರು. ಆದರೆ ವಾಸ್ತವ ಸಂಗತಿಯನ್ನು ಒಪ್ಪಲು ತಯಾರಿಲ್ಲದ ನೆಹರು, ದೇಶ ವಿಭಜನೆ ಎನ್ನುವುದು ಫೆಂಟಾಸ್ಟಿಕ್ ನಾನ್ಸೆನ್ಸ್ ಎಂದು ಕರೆದಿದ್ದರು. ಹುಚ್ಚು ಜನರು ಏನು ಬೇಕಾದರೂ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ದೇಶ ವಿಭಜನೆಗೂ ಮುನ್ನ ನನ್ನ ದೇಹವನ್ನು ಎರಡು ಭಾಗ ಮಾಡಿ ಎಂದು ಗಾಂಧೀಜಿ ಹೇಳಿದ್ದರು. ಆದರೆ ನೆಹರೂ ಅವರೇ, ದೇಶ ವಿಭಜನೆಯ ದಾಖಲೆಗೆ ಸಹಿ ಮಾಡಿದರು. ವಿಭಜನೆಯ ಮಾತನಾಡಿದರೆ ನಿಮ್ಮ ಕತ್ತಿಗೆ ನಮ್ಮ ಕತ್ತಿ ಉತ್ತರ ನೀಡುತ್ತದೆ ಎಂದಿದ್ದ ಸರ್ದಾರ್ ಪಟೇಲ್ ಮೊದಲ ಗೃಹಸಚಿವರಾದರು. ದೇಶ ವಿಭಜನೆ ಯಾರಿಗೂ ಬೇಕಿರಲಿಲ್ಲ, ಆದರೆ ಅದು ಸಂಭವಿಸಿತು. ಹಾಗಾಗಿ, ಈ ದೇಶದ ವಿಭಜನೆಗೆ ಮೂಲ ಕಾರಣ ಏನೆಂದು ನಾವು ಮೊದಲು ತಿಳಿಯಬೇಕಿದೆ.
ದೇಶ ಬಿಟ್ಟು ತೊಲಗಿ ಅಭಿಯಾನದ ಕುರಿತು ಮಾತನಾಡಿದ ರಾಮ್ ಮಾಧವ್, ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಮೂವ್‌ಮೆಂಟ್ ನಡೆಸಬೇಕು ಎಂದು ಗಾಂಧೀಜಿ ನಿರ್ಧಾರ ಮಾಡಿದರು. ಆದರೆ, ಮುಸ್ಲಿಮರು ಜತೆಗೆ ಬರದಿದ್ದರೆ ದೇಶದ ಸ್ವಾತಂತ್ರ್ಯ ಅಸಾಧ್ಯ ಎಂದು ಗಾಂಧೀಜಿ ನಂಬಿದ್ದರು. ಅವರು ಮುಸ್ಲಿಂ ಲೀಗ್ ಬೆಂಬಲವನ್ನು ಈ ಹೋರಾಟಕ್ಕೆ ಕೇಳಿದರು.
ಇದನ್ನೂ ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಸು-30 ಎಂಕೆಐ ವಾಯುಪಡೆಯ ಬೆನ್ನೆಲುಬಾದರೆ ಮಿರೇಜ್ 2000 ತೋಳ್ಬಲ!
ಅತ್ತ, ಟರ್ಕಿಯಲ್ಲಿ ಖಲೀಫನ ಆಡಳಿತವನ್ನು ಅಲ್ಲಿನ ಮುಸ್ಲಿಮರೇ ಕೊನೆಗೊಳಿಸಿದ್ದರು. ಆದರೆ ಭಾರತದ ಮುಸ್ಲಿಮರು, ಖಲೀಫನ ಆಡಳಿತ ಬೇಕೆಂದು ಹೋರಾಟ ಮಾಡಲು ನಿರ್ಧರಿಸಿದ್ದರು. ನೀವು ಕ್ವಿಟ್ ಇಂಡಿಯಾ ಮೂವ್‌ಮೆಂಟ್‌ಗೆ ಬೆಂಬಲ ನೀಡಿದರೆ ನಾವು ನಿಮಗೆ ಭಾರತದಲ್ಲಿ ಖಿಲಾಫತ್ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಗಾಂಧೀಜಿ, ಮುಸ್ಲಿಂ ಲೀಗ್ ಜತೆಗೆ ಒಪ್ಪಂದ ಮಾಡಿಕೊಂಡರು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕಿರಲಿ, ಭಾರತಕ್ಕೂ ಈ ಖಿಲಾಫತ್ ಆಂದೋಲನಕ್ಕೂ ದೂರದೂರದವರೆಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ ಮುಸ್ಲಿಮರನ್ನು ಒಟ್ಟಿಗೆ ಮಾಡಿಕೊಳ್ಳಬೇಕು ಎಂಬ ಒಂದೇ ಉದ್ದೇಶಕ್ಕೆ ಗಾಂಧೀಜಿ ಒಪ್ಪಂದ ಮಾಡಿಕೊಂಡರು. ನೀವು ನಮಗೆ ಬೆಂಬಲ ನೀಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮೊದಲ ಬಾರಿಗೆ ತರಕಾರಿ ಮಾರಾಟದ ವೇಳೆ ನಡೆಯುವಂತೆ ಚೌಕಾಸಿಯ ಮಟ್ಟಕ್ಕೆ ಇಳಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಆಯ್ದುಕೊಂಡಿರುವ ಈ ಮಾರ್ಗ, ಭಾರತದ ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆ ಎಂದು ಗಾಂಧೀಜಿಯವರಿಗೆ ಸಾವರ್ಕರ್ ಎಚ್ಚರಿಸಿದ್ದರು. ತುಷ್ಟೀಕರಣ ಬದಲಿಗೆ, ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮೊಟ್ಟಿಗೆ ಬರಲು ಮುಸ್ಲಿಮರಿಗೆ ಹೇಳಿ. ಒಟ್ಟಿಗೆ ಬರದಿದ್ದರೆ ನಿಮ್ಮನ್ನು ಬಿಟ್ಟು ಹೋರಾಟ ಮಾಡುತ್ತೇವೆ, ವಿರೋಧ ಮಾಡಿದರೆ ನಿಮ್ಮನ್ನೂ ವಿರೋಧಿಸಿ ಸ್ವಾತಂತ್ರ್ಯ ಗಳಿಸುತ್ತೇವೆ ಎಂದು ಸ್ಪಷ್ಟವಾಗಿ ಮುಸ್ಲಿಮರಿಗೆ ತಿಳಿಸಿ ಎಂದಿದ್ದರು.
ಆದರೆ ಒಂದರ ನಂತರ ಒಂದರಂತೆ ಮುಸ್ಲಿಂ ಲೀಗ್ ಜತೆ ರಾಜಿ ಮಾಡಿಕೊಳ್ಳುತ್ತಲೇ ಸಾಗಿ ಕೊನೆಗೆ ದೇಶ ವಿಭಜನೆಗೆ ಕಾರಣವಾಯಿತು. ದೇಶ ವಿಭಜನೆಯಾದ ನೋವು ಗಾಂಧೀಜಿಯವರಿಗಿತ್ತು. ಇದೇ ಕಾರಣಕ್ಕೆ ಅವರು ಸ್ವಾತಂತ್ರ್ಯ ಲಭಿಸಿದ ದಿನದಂದು ನವದೆಹಲಿಯಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿಲ್ಲ. ಆಗಮಿಸುವಂತೆ ನೆಹರು, ಮೌಂಟ್ ಬ್ಯಾಟನ್ ಮನವಿಗೂ ಸ್ಪಂದಿಸಲಿಲ್ಲ. ದೇಶ ವಿಭಜನೆ ವೇಳೆ ನಡೆದ ದಂಗೆಯಲ್ಲಿ ನೊಂದವರ ಸಹಾಯಕ್ಕೆ ಕೊಲ್ತತದಲ್ಲಿ ನಿಂತಿದ್ದರು.
ಅಂದು ದೇಶ ವಿಭಜನೆ ಆಗಬಾರದು ಎಂದು ಹೇಳಿದ್ದೆ, ಅಂದು ಇಡೀ ದೇಶ ನನ್ನ ಜತೆಗಿತ್ತು. ಆದರೆ ಇಂದು ನನ್ನ ಜತೆಗೆ ಯಾರೂ ಇಲ್ಲ. ಇದಕ್ಕೆಲ್ಲ ದಯಮಾಡಿ ಈ ವೃದ್ಧನನ್ನು ಹೊಣೆ ಮಾಡಬೇಡಿ ಎಂದು ಕ್ಷಮಾ ಭಾವನೆಯನ್ನು ಗಾಂಧೀಜಿ ವ್ಯಕ್ತಪಡಿಸಿದ್ದರು. ಹೌದು, ದೇಶ ವಿಭಜನೆಗೆ ನಾವು ಯಾವುದೇ ಒಬ್ಬ ವ್ಯಕ್ತಿಯನ್ನು ನಿಂದನೆ ಮಾಡಲು ಸಾಧ್ಯವಿಲ್ಲ. ಆದರೆ ಒಂದರ ನಂತರ ಒಂದರಂತೆ ನಡೆದ ಘಟನಾವಳಿಗಳು ದೇಶ ವಿಭಜನೆಗೆ ಕಾರಣವಾದವು ಎಂದು ರಾಮ ಮಾಧವ್ ಹೇಳಿದರು.
ಈ ರೀತಿ ಆಗಬಾರದು ಎಂದರೆ, ಎರಡು ವಿಚಾರ ನೆನಪಿಡಬೇಕು. ಮೊದಲನೆಯದು, ಯಾವುದೇ ಸಂದರ್ಭದಲ್ಲೂ ದೇಶದ ಸಾರ್ವಭೌಮತೆಯಲ್ಲಿ ರಾಜಿ ಮಾಡಿಕೊಳ್ಳಬಾರದು. ಇದರಲ್ಲಿ ಎಳ್ಳಷ್ಟೂ ಅಸ್ಪಷ್ಟತೆ ಇರಬಾರದು. ಎರಡನೆಯದು, ಎಂದಿಗೂ ತುಷ್ಟೀಕರಣವನ್ನು ಪಾಲಿಸಬಾರದು. ತುಷ್ಟೀಕರಣ ಎಂದಿಗೂ ದೇಶವನ್ನು ಮುಂದಕ್ಕೆ ಒಯ್ಯಲಾರದು ಎಂದು ತಿಳಿಸಿದರು.
ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ