Site icon Vistara News

Auto Strike In Bangalore | ಬಾಡಿಗೆ ಬೈಕ್‌ ಸೇವೆಗೆ ವಿರೋಧ; ರಾಜಧಾನಿಯಲ್ಲಿ ಬೀದಿಗಿಳಿದ ಆಟೋ ಚಾಲಕರು

Auto Strike In Bangalore

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಟೋ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದು, ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಸಿಡಿದಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡುವುದು ಹಾಗೂ ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ (Auto Strike In Bangalore) ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ತಳ್ಳಾಟ-ನೂಕಾಟಗಳು ನಡೆದವು. ಹಲವರು ಪೊಲೀಸರು ವಶಕ್ಕೆ ಪಡೆದುಕೊಂಡರು.

ಬೆಂಗಳೂರು ಆಟೋ ಚಾಲಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಿಂದ ಬೃಹತ್ ಆಟೋ ರ‍್ಯಾಲಿ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಅನುಮತಿ ಸಿಗದ ಕಾರಣಕ್ಕೆ ಕಾಲ್ನಡಿಗೆ ಮೂಲಕವೇ ವಿಧಾನಸೌಧ ಮುತ್ತಿಗೆಗೆ ಮುಂದಾದರು. ಮುಷ್ಕರಕ್ಕೆ ಸುಮಾರು 21 ಆಟೋ ಸಂಘಟನೆಗಳು ಸಾಥ್ ನೀಡಿದ್ದು, ರಾಜಧಾನಿಯ 2,10,000 ಚಾಲಕರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ | Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್‌ ಜೋಷಿ ಮಾಹಿತಿ

ಯಾವ ಕಾರಣಕ್ಕೆ ಮುಷ್ಕರ?
ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಟೋ ಚಾಲಕರು ಬೀದಿಗೆ ಬೀಳುತ್ತಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ಇಲ್ಲದಿದ್ದರೂ ರಾಜಾರೋಷವಾಗಿ ಸಂಚಾರ ಮಾಡುತ್ತಿದೆ. ಆರ್‌ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ಮಟ್ಟ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಚಾಲಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಜತೆಗೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್‌ಗಳ ಸೇವೆಗೂ ಅನುಮತಿ ನೀಡಿದ್ದು, ಇದನ್ನೂ ವಾಪಸ್‌ ಪಡೆಯಬೇಕು. ವಿಕೆಡ್ ರೈಡ್ ಭಾಗವಾಗಿರುವ ಬೌನ್ಸ್‌ ಕಂಪನಿಯಿಂದ ಮೊದಲ ಹಂತದಲ್ಲಿ 100 ಇ-ಬೈಕ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದು, ಬಳಿಕ ಹಂತ ಹಂತವಾಗಿ 1000 ಇ- ಬೈಕ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ. ಈ ಹಿಂದೆ ಕೂಡ ಬೈಕ್ ಸೇವೆ ನೀಡುತ್ತಿದ್ದ ವಿಕೆಡ್ ರೈಡ್ ಕಂಪನಿ, ಕೊರೊನಾ ಸಮಯದಲ್ಲಿ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇದರಿಂದಾಗಿ ಆಟೋ ಬಳಸುವವರ ಸಂಖ್ಯೆ ಕಡಿಮೆ ಆಗಲಿದೆ. ಹೀಗಾಗಿ ಅನುಮತಿಯನ್ನು ವಾಪಸ್‌ ಪಡೆಯಬೇಕೆಂದು ಚಾಲಕರು ಮನವಿ ಮಾಡಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಚಿವ ಶ್ರೀರಾಮುಲು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಸಾರಿಗೆ ಇಲಾಖೆಯು ತನ್ನ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು. ಪೊಲೀಸರ ವಿರೋಧದ ನಡುವೆಯೇ ಹೋರಾಟಕ್ಕೆ ಮುಂದಾದ ಚಾಲಕರು, ವೇದಿಕೆ ಕಾರ್ಯಕ್ರಮ ನಡೆಸಿ ಬಳಿಕ ವಿಧಾನಸೌಧಕ್ಕೆ ತೆರಳಲು ಯೋಜಿಸಿದ್ದಾರೆ. ಆದರೆ, ಫ್ರೀಡಂಪಾರ್ಕ್ ಗೇಟ್ ಅನ್ನು ಬಂದ್ ಮಾಡಲಾಗಿದ್ದು, ಅಲ್ಲಿ ಪೊಲೀಸರ ಜತೆಗೆ ವಾಗ್ವಾದ ನಡೆದಿದೆ. ನೂಕಾಟ-ತಳ್ಳಾಟಗಳೂ ನಡೆದಿವೆ. ಇದೇ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಸೇವೆಯಲ್ಲಿ ನಿರತವಾಗಿದ್ದ ಆಟೋಗಳನ್ನು ತಡೆದ ಪ್ರತಿಭಟನಾನಿರತ ಚಾಲಕರು, ಆಟೋ ಓಡಿಸುತ್ತಿದ್ದ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ರಾಮಲಿಂಗಾರೆಡ್ಡಿ
ಆಟೋ ಚಾಲಕರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ, ಬೈಕ್ ಟ್ಯಾಕ್ಸಿ ರದ್ದತಿಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು. ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಜತೆಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಾವು ಬಿಜೆಪಿ ರೀತಿ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದರು.

ಬಳಿಕ ಮಾತನಾಡಿದ ಬೆಂಗಳೂರು ಆಟೋ ಚಾಲಕರ ಮಾಲೀಕರ ಸಂಘದ ಸಂಚಾಲಕ ಮಂಜುನಾಥ್, ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲಿಸುತ್ತೇವೆ. ರ‍್ಯಾಪಿಡೋ ಆಟೋದಿಂದ ನಮ್ಮ ಆಟೋ ಕಾರ್ಮಿಕರ ಆದಾಯ ಕುಸಿದಿದೆ. ಸರ್ಕಾರ ಇದನ್ನು‌ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರು ರ‍್ಯಾಲಿಗೆ ಅವಕಾಶ ಇಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಇವರನ್ನೆಲ್ಲ ಕೇಳಿಕೊಂಡು ಹೋರಾಟ ಮಾಡಲು ಆಗುವುದಿಲ್ಲ. 2 ಸಾವಿರ ಆಟೋ ಡ್ರೈವರ್‌ಗಳು ಪೋಸ್ಟಲ್ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇ-ಬೈಕ್ ಟ್ಯಾಕ್ಸಿ, ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Athiya Shetty | ಶೂಟಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌

Exit mobile version