ಬೆಂಗಳೂರು: ಅನಧಿಕೃತ ವೈಟ್‌ಬೋರ್ಡ್ (Whiteboard) ಬೈಕ್ ಟ್ಯಾಕ್ಸಿಗಳನ್ನು (Bike Taxi) ನಿಷೇಧಿಸುವಂತೆ ಒತ್ತಾಯಿಸಿ, ಬೆಂಗಳೂರಿನಲ್ಲಿ ಒಂದು ದಿನ ಆಟೋ (Auto Strike in Bengaluru) ಓಡಾಟ ಬಂದ್ ಮಾಡಿ ಚಾಲಕರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಭಾನುವಾರ (ಮಾ.19) ಮಧ್ಯರಾತ್ರಿಯಿಂದಲೇ ಆಟೋ ಓಡಾಟ ಬಂದ್ ಆಗಿದ್ದು, ಸೋಮವಾರ (ಮಾ.20) ಇಡೀ ದಿನ ಆಟೋ ಸೇವೆ ನೀಡದಿರಲು ಮುಂದಾಗಿದ್ದಾರೆ. ಆಟೋ ಚಾಲಕರು ಕರೆ ನೀಡಿರುವ ಮುಷ್ಕರಕ್ಕೆ ಕೆಲ ಸಂಘಟನೆಗಳು ಹಾಗೂ ಚಾಲಕರು ಬೆಂಬಲ ನೀಡಿಲ್ಲ. ಹೀಗಾಗಿ ನಗರದ ಹಲವೆಡೆ ಆಟೋ ಸಂಚಾರ ಕಂಡು ಬಂತು.
ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಬಸ್ ಸೇವೆ
ಆಟೋ ಸಂಚಾರ ಸ್ಥಗಿತ ಹಿನ್ನೆಲೆ ಬಿಎಂಟಿಸಿ ಬಸ್ ಬೆಳಗ್ಗೆ ನಾಲ್ಕು ಗಂಟೆಯಿಂದ ಸಂಚಾರ ಆರಂಭಿಸಿದೆ. ಬಿಎಂಟಿಸಿಯಲ್ಲಿ ಒಟ್ಟು 6,700 ಬಸ್‌ಗಳಿದ್ದು ಸೋಮವಾರ ಒಟ್ಟು ಮೂರು ಶಿಫ್ಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಫಸ್ಟ್, ಸೆಕೆಂಡ್ ಹಾಗೂ ಜನರಲ್ ಶಿಫ್ಟ್ ಸೇರಿದಂತೆ 6,200 ಬಸ್ಸುಗಳು ರೋಡಿಗಿಳಿಯಲಿವೆ. ಪ್ರಯಾಣಿಕರ ಸಂಖ್ಯೆ ಏನಾದರೂ ಹೆಚ್ಚಾದರೆ ಮತ್ತಷ್ಟು ಬಸ್ಸುಗಳನ್ನು ರೋಡಿಗಿಳಿಸಲು ಚಿಂತನೆ ನಡೆಸಲಾಗಿದೆ. ಪ್ರತಿದಿನ 29 ಲಕ್ಷ ಪ್ರಯಾಣಿಕರು ಬಿಎಂಟಿಸಿಯಲ್ಲಿ ಸಂಚಾರ ಮಾಡುತ್ತಿದ್ದು, ಆಟೋ ಬಂದ್ ಹಿನ್ನೆಲೆಯಲ್ಲಿ ಈ ಸಂಖ್ಯೆ 35 ರಿಂದ 40 ಲಕ್ಷಕ್ಕೆ ದಾಟಬಹುದೆಂಬ ನಿರೀಕ್ಷೆ ಇದೆ.
ಇತ್ತ ನಮ್ಮ ಮೆಟ್ರೋ ಕೂಡ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭಿಸಿ, ಪೀಕ್ ಸಮಯದಲ್ಲಿ ಮೂರರಿಂದ ನಾಲ್ಕು ನಿಮಿಷಗಳಿಗೆ ಒಂದು ಟ್ರೈನ್ ಸಂಚಾರ ಮಾಡುತ್ತಿದೆ. ಉಳಿದಂತೆ ಪ್ರಯಾಣಿಕರ ದಟ್ಟಣೆ ಇಲ್ಲದಿದ್ದರೆ 7-8 ನಿಮಿಷಗಳಿಗೊಂದು ಟ್ರೈನ್ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಪ್ರತಿದಿನ ನಮ್ಮ ಮೆಟ್ರೋದಲ್ಲಿ ಒಟ್ಟು 5 ಲಕ್ಷದ 40 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಆದರೆ, ಇಂದು ಸುಮಾರು ಹತ್ತು ಲಕ್ಷ ಪ್ರಯಾಣಿಕರು ಸಂಚಾರ ಮಾಡುವ ಸಾಧ್ಯತೆಯಿದೆ. ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಸಮಯದ ಬದಲಾವಣೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಪ್ರಿಪೇಯ್ಡ್ ಆಟೋಗಾಗಿ ಕ್ಯೂ ನಿಂತ ಪ್ರಯಾಣಿಕರು
ಆಟೋ ಚಾಲಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ಚಾಲಕರು ದುಪ್ಪಟ್ಟು ದರಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಪ್ರಯಾಣಿಕರು ಪ್ರೀ ಪೇಯ್ಡ್ ಆಟೋಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಿ ಪೇಯ್ಡ್ ಆಟೋ ಸರ್ವಿಸ್ ಸಿಗದೆ ಪರದಾಟ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಸಾಲುಗಟ್ಟಿ ನಿಲ್ಲುತ್ತಿದ್ದ ಪ್ರೀಪೇಯ್ಡ್ ಆಟೋಗಳ ಸಂಚಾರ ಸೋಮವಾರ ವಿರಳವಾಗಿರುವುದು ಕಂಡು ಬಂತು.
ಚಾಲಕರ ಮಧ್ಯೆಯೇ ಜಟಾಪಟಿ
ಆಟೋ ಮುಷ್ಕರಕ್ಕೆ ಕೆಲ ಚಾಲಕರು ಬೆಂಬಲ ನೀಡದ್ದಕ್ಕೆ ಮುಷ್ಕರ ನಿರತರು ಕಿಡಿಕಾರಿದ್ದಾರೆ. ರಸ್ತೆಗಿಳಿದ ಆಟೋ ಚಾಲಕರನ್ನು ತಡೆದು, ಆಟೋ ಯಾಕೆ ಓಡಿಸುತ್ತಿದ್ದೀರಾ ಎಂದು ವಾಗ್ವಾದಕ್ಕೆ ಇಳಿದರು. ಮಾತ್ರವಲ್ಲದೆ ರೈಲ್ವೆ ನಿಲ್ದಾಣದ ಮುಂಭಾಗ ಓಡಾಡುತ್ತಿದ್ದ ಆಟೋಗಳನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಪ್ರತಿಭಟನೆಗೆ ಬೆಂಬಲ ನೀಡಿ ಎಂದು ಒತ್ತಾಯಿಸಿದ ಘಟನೆ ನಡೆಯಿತು. ಇತ್ತ ಚಾಲಕರ ಮಧ್ಯೆಯೇ ಜಟಾಪಟಿ ಶುರುವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಚಾಲಕರನ್ನು ಚದುರಿಸಿದರು.
ಇತ್ತ ನಾಯಂಡಹಳ್ಳಿ ಸಿಗ್ನಲ್ ಬಳಿ ಸಂಚಾರ ಮಾಡುತ್ತಿದ್ದ ಆಟೋ ಚಾಲಕರನ್ನು ತಡೆದು ಬೆಂಬಲ ನೀಡದ ಕಾರಣಕ್ಕೆ ಚಪ್ಪಾಳೆ ತಟ್ಟುತ್ತಾ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ವಿಭಿನ್ನವಾಗಿ ಆಕ್ರೋಶ ಹೊರಹಾಕಿದರು. ಮತ್ತೊಂದು ಕಡೆ ಬಂದ್‌ಗೆ ಬೆಂಬಲ ನೀಡದೆ ರಸ್ತೆಗೆ ಇಳಿದ ಆಟೋಗಳ ಟಾಪ್ ಶೀಟ್ ಕತ್ತರಿಸಿ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ರ‍್ಯಾಪಿಡೋ ಆ್ಯಪ್ ಸಚಿವ ಶ್ರೀರಾಮುಲು ಅವರದ್ದೇ?
ಕೆಲವು ಚಾಲಕರಿಗೆ ಮುಷ್ಕರ ಇರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಯಾರೋ ಪ್ರತಿಭಟನೆ ಮಾಡಿದ್ದರೆ, ನಮ್ಮ ಹೊಟ್ಟೆ ತುಂಬುವುದು ಬೇಡವೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಷ್ಕರ ಮಾಡುವುದರಿಂದ ಯಾವುದೇ ಉಪಯೋಗ ಇಲ್ಲ. ಹೊಟ್ಟೆ ಪಾಡಿಗಾಗಿ ಆಟೋ ಓಡಿಸುತ್ತಿದ್ದೇವೆ. ಸಿಎಂ, ಸಚಿವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೆಲವು ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ, ನಾವು ಆಟೋ ಓಡಿಸಿಕೊಂಡೇ ಬೆಂಬಲ ಕೊಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಆಕ್ರೋಶವನ್ನು ಹೊರಹಾಕುತ್ತಾ, ರ‍್ಯಾಪಿಡೋ ಆ್ಯಪ್ ಸಚಿವ ಶ್ರೀರಾಮುಲು ಅವರದ್ದಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಆ್ಯಪ್ ಅನ್ನು ಬಂದ್ ಮಾಡಲು ಸಾಧ್ಯವಿಲ್ಲ. ಅವರದ್ದೇ ಆ್ಯಪ್ ಅನ್ನು ಹೇಗೆ ನಿಷೇಧ ಮಾಡುತ್ತಾರೆ ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Tipu Sultan: ʼಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣ ಕೈಬಿಟ್ಟ ಮುನಿರತ್ನ; ನಿರ್ಮಲಾನಂದ ಸ್ವಾಮೀಜಿ ಸೂಚನೆ
ಬಂದ್‌ಗೆ ಬೆಂಬಲವಿಲ್ಲ
ಆಟೋ ಚಾಲಕರ ಬಂದ್‌ಗೆ ಓಲಾ- ಊಬರ್ ಸಂಘಟನೆ ಬೆಂಬಲ ನೀಡಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿರುವ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್, ಚಾಲಕರು ಸ್ವಯಂಪ್ರೇರಿತವಾಗಿ ಕೆಲಸ ಮಾಡುವುದಾರೆ ಮಾಡಲಿ. ಆದರೆ, ಯಾರೂ ಕೂಡ ಬಂದ್‌ನಲ್ಲಿ ಭಾಗಿಯಾಗಿಲ್ಲ. ಈಗಾಗಲೇ ಆಟೋ ಚಾಲಕರು ಲಾಗಿನ್ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ