Site icon Vistara News

Award Ceremony | ಸೇಡಂನಲ್ಲಿ ಆರು ಸಾಧಕರಿಗೆ ನ. 26ರಂದು ‘ಅಮ್ಮ ಪ್ರಶಸ್ತಿ’ ಪ್ರದಾನ

amma award ಸೇಡಂ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂ‌ರ್‌ ಪ್ರತಿಷ್ಠಾನ

ಸೇಡಂ: ನಗರದ ಐತಿಹಾಸಿಕ ಚಾಲುಕ್ಯರ ಕಾಲದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನ. 26ರಂದು ಸಂಜೆ 5.30ಕ್ಕೆ 22ನೇ ವರ್ಷದ “ಅಮ್ಮ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಮಹಿಪಾಲರೆಡ್ಡಿ ಮುನ್ನೂರ್

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂ‌ರ್‌ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ “ಅಮ್ಮ ಪ್ರಶಸ್ತಿ”ಗೆ ಈ ಬಾರಿ ಆರು ಸಾಹಿತಿಗಳು ಭಾಜನರಾಗಿದ್ದು, ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸುವರು. ಸೇಡಂನ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಸಮ್ಮುಖ ವಹಿಸುವರು ಎಂದು ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿ ಪುರಸ್ಕೃತರು
ಮಧುರಾಣಿ ಎಚ್‌.ಎಸ್‌. (ನೀಲಿ ಚುಕ್ಕಿಯ ನೆರಳು-ಕವನ ಸಂಕಲನ), ಎಸ್ .ಗಂಗಾಧರಯ್ಯ (ಮಣ್ಣಿನ ಮುಚ್ಚಳ-ಕಥಾ ಸಂಕಲನ), ಆಶಾ ರಘು (ಮಾಯೆ-ಕಾದಂಬರಿ), ಸಬಿತಾ ಬನ್ನಾಡಿ (ಇದಿರು ನೋಟ- ಅಂಕಣ ಸಂಕಲನ), ಡಾ.ಅಪ್ಪಗೆರೆ ಸೋಮಶೇಖರ (ಬೆವರ ಬವಣೆ-ಲೇಖನಗಳ ಸಂಕಲನ) ಹಾಗೂ ಡಾ.ಎಂ.ಬಿ. ಕಟ್ಟಿ (ಆರೂಢ ಪಂಥ-ಲೇಖನಗಳ ಸಂಕಲನ) ಇವರು ಈ ಬಾರಿಯ ಅಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಲಾ ಐದು ಸಾವಿರ ನಗದು ಪುರಸ್ಕಾರ, ಸತ್ಕಾರ, ಪ್ರಮಾಣ ಪತ್ರ, ಮೊಮೆಂಟೋ ಸೇರಿದಂತೆ ನೆಲದ ಸಿರಿಧಾನ್ಯ ತೊಗರಿ ಬೇಳೆ ಜತೆಗೆ ಉಡಿ ತುಂಬುವ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೆ ಹೊಲಿಗೆ ಮಷಿನ್‌ ವಿತರಣೆ
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನಾಗಪ್ಪ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ಮಷಿನ್‌ಗಳನ್ನು ವಿತರಿಸಲಾಗುವುದು ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂ‌ರ್‌ ತಿಳಿಸಿದ್ದಾರೆ.

ಮಾಜಿ ಸಚಿವರಾದ ಲೀಲಾದೇವಿ ಆರ್.ಪ್ರಸಾದ ಅವರು ಪ್ರಶಸ್ತಿ ಪ್ರದಾನ ಮಾಡುವರು. ಶಾಸಕರು ಮತ್ತು ಎನ್‌ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಮಾಜಿ ಉಪಸಭಾತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಮುಖ್ಯ ಅತಿಥಿಗಳಾಗಿದ್ದಾರೆ. ವಿಶ್ರಾಂತ ಪ್ರಾಂಶುಪಾಲ ಪ್ರೊ.ಮನ್ನೆ ಹಾಶರೆಡ್ಡಿ ಉಪಸ್ಥಿತರಿರುವರು. ಅಮ್ಮನ ಕುರಿತು ಯುವ ಗಾಯಕ ವೀರೇಂದ್ರ ಭಂಟನಳ್ಳಿ ಹಾಡುಗಳನ್ನು ಹಾಡಲಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಎನ್‌ಐಎ ಎಫ್‌ಐಆರ್‌ ದಾಖಲಿಸಿ ನಾಲ್ಕೇ ದಿನಕ್ಕೆ ಮಂಗಳೂರಲ್ಲಿ ಸ್ಫೋಟಿಸಿದ್ದ ಶಾರಿಕ್‌!

Exit mobile version