ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ಹಾಗೂ ಬೆಂಗಳೂರು ಡಾ.ನರಹಳ್ಳಿ ಪ್ರತಿಷ್ಠಾನ ವತಿಯಿಂದ ಕೊಡುಮಾಡುವ ನರಹಳ್ಳಿ ಪ್ರಶಸ್ತಿಗೆ ಖ್ಯಾತ ವಿಮರ್ಶಕ ಹಾಗೂ ಕಥೆಗಾರ ಡಾ. ರಾಜಶೇಖರ ಹಳೆಮನೆ ಭಾಜನರಾಗಿದ್ದು, ಸೆಪ್ಟೆಂಬರ್ 18ರಂದು ಪ್ರಶಸ್ತಿ ಪ್ರದಾನ (Award Function) ಮಾಡಲಾಗುವುದು.
ಭಾನುವಾರ ಬೆಳಗ್ಗೆ 10.30ಕ್ಕೆ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಡಾ. ರಾಜಶೇಖರ ಹಳೆಮನೆ ಅವರನ್ನು ಆಯ್ಕೆ ಮಾಡಲಾಗಿದೆ.
ಪತ್ರಕರ್ತರು ಹಾಗೂ ಸಾಹಿತಿ ಜಿ.ಎನ್. ರಂಗನಾಥ ರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ನರಹಳ್ಳಿ ಪ್ರತಿಷ್ಠಾನ ಹಾಗೂ ಪ್ರಸಿದ್ಧ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಡಾ. ವೆಂಕಟಗಿರಿ ದಳವಾ ಉಪಸ್ಥಿತರಿರಲಿದ್ದಾರೆ.
ಹಿರಿಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಬಂದ ಪ್ರಶಸ್ತಿ ಮತ್ತು ಗೌರವಗಳ ಮೊತ್ತದಿಂದ ಡಾ. ನರಹಳ್ಳಿ ಪ್ರತಿಷ್ಠಾನವನ್ನು ಹುಟ್ಟುಹಾಕಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಪ್ರತಿವರ್ಷ ಒಬ್ಬ ಪ್ರತಿಭಾನ್ವಿತ ಬರಹಗಾರರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರಲಾಗುತ್ತಿದೆ.
ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ಈಗಾಗಲೇ ನಾಡಿನ ಎಂಟು ಮಂದಿ ಖ್ಯಾತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
2014- ಟಿ. ಯಲ್ಲಪ್ಪ, 2015 -ಪಿ. ಚಂದ್ರಿಕಾ, 2016 – ಡಾ ವಿನಯಾ ಒಕ್ಕುಂದ, 2017- ಎಂ.ಆರ್. ದತ್ತಾತ್ರಿ, 2018- ಡಾ. ವೆಂಕಟಗಿರಿ ದಳವಾಯಿ, 2019- ರಾಜೇಂದ್ರ ಪ್ರಸಾದ್, 2020-ಚಿದಾನಂದ ಸಾಲಿ, 2021 ಡಾ. ಜಿ.ಎನ್. ಉಪಾಧ್ಯ ಅವರಿಗೆ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ | ICC Awards | ಸಿಕಂದರ್ ರಾಜಾಗೆ ಐಸಿಸಿ ಪ್ರಶಸ್ತಿ, ಜಿಂಬಾಬ್ವೆ ಸ್ಟಾರ್ ಬ್ಯಾಟರ್ ವಿನೂತನ ಸಾಧನೆ