ಬೆಂಗಳೂರು: ಕನ್ನಡ ಭಾಷೆಗಾಗಿ ಶ್ರಮಿಸಿದವರಿಗೆ, ಕನ್ನಡ ಸಂಸ್ಕೃತಿಯ ಹಿರಿಮೆ ಹೆಚ್ಚಿಸಿದವರಿಗೆ ಕನ್ನಡ ಗೆಳೆಯರ ಬಳಗವು ನಾಡೋಜ ಡಾ.ಎಂ.ಚಿದಾನಂದಮೂರ್ತಿ ಹೆಸರಿನಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿರುವ ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿಗೆ (Awards ceremony) ಇತಿಹಾಸ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿ, ಕನ್ನಡದ ಹಿರಿಯ ವಿದ್ವಾಂಸ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ, ಶಾಸನ, ಲಿಪಿ ತಜ್ಞ ಡಾ. ದೇವರಕೊಂಡಾರೆಡ್ಡಿ ಹಾಗೂ ಇತಿಹಾಸ ತಜ್ಞ, ಸಾಹಿತಿ ಡಾ.ಎಚ್.ಎಸ್. ಗೋಪಾಲರಾವ್ ಆಯ್ಕೆಯಾಗಿದ್ದಾರೆ.
೨೦೨೦, ೨೦೨೧ ಹಾಗೂ ೨೦೨೨ನೇ ಸಾಲಿಗೆ ಈ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಗೆಳೆಯರ ಬಳಗವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಕಾರಣದಿಂದಾಗಿ ಕಳೆದ ೨ ವರ್ಷಗಳು ಪ್ರಶಸ್ತಿ ನೀಡಲಾಗಿರಲಿಲ್ಲ. ಈಗ ಡಿ.7ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಪ್ರಶಸ್ತಿಯು ೫೦೦೦ ರೂಪಾಯಿ ನಗದು, ಪ್ರಶಸ್ತಿ ಫಲಕ, ಫಲ ತಾಂಬೂಲಗಳನ್ನೊಳಗೊಂಡಿದೆ.
ಪ್ರಶಸ್ತಿಗೆ ಆಯ್ಕೆಯಾದವರು ಯಾರು?
೨೦೨೦ರ ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿಯನ್ನು ಇತಿಹಾಸಜ್ಞ, ಸಂಶೋಧಕ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಚಿತ್ರದುರ್ಗದ ಬಗ್ಗೆ ವಿಸ್ತೃತ ಸಂಶೋಧನೆ ಮಾಡಿರುವ ಪ್ರೊ. ಲಕ್ಷ್ಮಣ್ ತೆಲಗಾವಿ ಅವರನ್ನು ಆಯ್ಕೆ ಮಾಡಲಾಗಿದೆ. ೨೦೨೧ರ ಸಾಲಿನ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಶಾಸನ, ಲಿಪಿ ತಜ್ಞ ಡಾ. ದೇವರಕೊಂಡಾರೆಡ್ಡಿ ಹಾಗೂ ೨೦೨೨ರ ಸಾಲಿನ ಪ್ರಶಸ್ತಿಯನ್ನು ಕರ್ನಾಟಕ ಏಕೀಕರಣ ಇತಿಹಾಸ, ನಮ್ಮ ನಾಡು ಕರ್ನಾಟಕ ಕೃತಿಗಳನ್ನು ರಚಿಸಿರುವ ಇತಿಹಾಸ ತಜ್ಞ, ಸಾಹಿತಿ ಡಾ. ಎಚ್.ಎಸ್. ಗೋಪಾಲರಾವ್ ಅವರಿಗೆ ಕೊಡಮಾಡಲಾಗುತ್ತಿದೆ.
ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ
ಈ ಸಮಾರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಬಹುಮಾನ, ಸನ್ಮಾನ ಮಾಡಲಾಗುತ್ತದೆ. ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಸಭಾ ಸದಸ್ಯ, ಸಾಹಿತಿ ಡಾ. ಎಲ್. ಹನುಮಂತಯ್ಯ, ನಾಡೋಜ ಗೊ.ರು. ಚನ್ನಬಸಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಮುಂತಾದವರು ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ಏನಿದು ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ?
ನಾಡೋಜ ಡಾ. ಎಂ. ಚಿದಾನಂದಮೂರ್ತಿ ಅವರು ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರು. ಸಾಂಸ್ಕೃತಿಕ ಇತಿಹಾಸ, ಶಾಸನ ಶೋಧ, ಭಾಷಾ ವಿಜ್ಞಾನ, ಪ್ರಾಚೀನ ಕನ್ನಡ ಸಾಹಿತ್ಯ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನ ಶಿಸ್ತುಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ವಿದ್ವತ್ ಕ್ಷೇತ್ರದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಚಿಮೂ, “ಸಾಹಿತಿಗಳ, ಕಲಾವಿದರ ಬಳಗ”ದ ಪ್ರಧಾನ ಸಂಚಾಲಕರಾಗಿ ರಾಜ್ಯ ಮಟ್ಟದ ಮೊದಲ ಕನ್ನಡಪರ ಸಂಘಟನೆಯಾದ “ಕನ್ನಡ ಶಕ್ತಿ ಕೇಂದ್ರ”ದ ಸ್ಥಾಪಕ ಅಧ್ಯಕ್ಷರಾಗಿದ್ದವರು. ಈ ಮೂಲಕ ಕನ್ನಡ ಹೋರಾಟಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ತಮ್ಮ ಬದುಕಿನುದ್ದಕ್ಕೂ ಕನ್ನಡ ಸಂಸ್ಕೃತಿಯ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿಯಲು ಶ್ರಮಿಸಿದ್ದಾರೆ. ಹೀಗಾಗಿ ಅವರ ನೆನಪಿನಲ್ಲಿ ಕನ್ನಡ ಗೆಳೆಯರ ಬಳಗವು ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಇದನ್ನೂ ಓದಿ | Rashtrotthana Sahitya | ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ: ನ.19, 20ರಂದು ವಿವಿಧ ಪುಸ್ತಕಗಳ ಬಿಡುಗಡೆ, ಸೆಮಿನಾರ್