Site icon Vistara News

Amrit Mahotsav | ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದ ಹಲಗಲಿ ಬೇಡರ ಹತಾರ್ ಲಡಾಯಿ

Azadi Ka Amrit Mahotsav
ಅಶೋಕ್, ಬಾಗಲಕೋಟೆ

ಅಶೋಕ್, ಬಾಗಲಕೋಟೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವುದೇ ರೋಮಾಂಚನಕಾರಿ. ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದ ಹಲಗಲಿ ಬೇಡರ “ಹತಾರ್ ಲಡಾಯಿʼʼ ಬ್ರಿಟಿಷರ ನಿದ್ದೆಗೆಡಿಸಿದ್ದು ಸುಳ್ಳಲ್ಲ. 1857ರಲ್ಲಿ ಶುರುವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆ ದೇಶಾದ್ಯಂತ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿತ್ತು.

ಇದನ್ನು ಅರಿತ ಬ್ರಿಟಿಷ್ ಅಧಿಕಾರಿಗಳು ಭಾರತೀಯ ವೀರರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನ ಕಿತ್ತುಕೊಳ್ಳುವ ಹುನ್ನಾರ ನೆಡಿಸಿದ್ದರು. ಇದಕ್ಕಾಗಿ ಬ್ರಿಟಿಷರು ನಿಶಸ್ತ್ರೀಕರಣ ಕಾಯ್ದೆ ಜಾರಿಗೆ ತಂದಿದ್ದರು. ಆದರೆ ಆ ಕಾಯ್ದೆಯನ್ನು ವಿರೋಧಿಸಿದ್ದ ಆ ಒಂದು ಪುಟ್ಟ ಗ್ರಾಮ, ಕಂಪನಿ ಸರ್ಕಾರದ ನಿದ್ದೆಗೆಡಿಸಿತ್ತು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಆ ಗ್ರಾಮದ ವೀರ ಕಲಿಗಳು ಝಳಪಿಸುತ್ತಿದ್ದ ಕತ್ತಿಯ ಹೊಳಪಿಗೆ ಬ್ರಿಟಿಷರು ನಡುಗಿ ಹೋಗಿದ್ದರು. ನೇರವಾಗಿ ಆ ಇಬ್ಬರು ವೀರ ಕಲಿಗಳನ್ನು ಮಣಿಸಲಾಗದ ಹೇಡಿ ಬ್ರಿಟಿಷ್ ಸೇನೆಯು, ಕುತಂತ್ರದ ದಾರಿ ಹಿಡಿದು ಊರಿಗೆ ಬೆಂಕಿ ಹಚ್ಚಿ ಮಕ್ಕಳು, ಮರಿ ಎನ್ನದೇ ಹಲವು ವೀರರನ್ನು ಸುಟ್ಟು ಹಾಕಿದ್ದರು.

ವೀರತ್ವದಿಂದ ಬರೀಗೈಯಲ್ಲಿ ಯುದ್ಧ ಮಾಡಿದ ವೀರ ಕಲಿಗಳ ಯಶೋಗಾಥೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ಅದುವೇ “ಹಲಗಲಿ ಬೇಡರ ಹತಾರ್ ಲಡಾಯಿ”. ಸ್ವಾತಂತ್ರ್ಯ , ಸ್ವಾಭಿಮಾನಕ್ಕಾಗಿ ವೀರ ಮರಣವನ್ನಪ್ಪಿದ ಸಾರ್ಥಕತೆ ಮೆರೆದವರು ʻಜಡಗಣ್ಣ, ಬಾಲಣ್ಣʼರಿಬ್ಬರು ಹುಟ್ಟಿನಿಂದಲೇ ಶೂರರು, ವೀರರು.

ವೀರ ಮರಣವನ್ನಪ್ಪಿದ ಜಡಗಣ್ಣ, ಬಾಲಣ್ಣ

ಬೇಡರ ಜನಾಂಗದವರಾದ ಇವರಿಬ್ಬರ ಬಳಿ ಯಾವಾಗಲೂ ಕೆಲ ಶಸ್ತ್ರಾಸ್ತ್ರಗಳು ಇರುತ್ತಿದ್ದವು. ಇವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು, ಜತೆಗೆ ಜೀವ ಉಳಿಸಿಕೊಳ್ಳಲು ಬಳಸುತ್ತಿದ್ದ ಹತಾರ್ (ಚಾಕು,ತಲ್ವಾರ್,ಖಡ್ಗ) ಗಳಿಗೆ ಬ್ರಿಟಿಷ್ ಸರ್ಕಾರ ನಿಷೇಧ ಹೇರಿತ್ತು. ಕಾರಣ ಸ್ವಾತಂತ್ರ್ಯಕ್ಕಾಗಿ ಅದಾಗಲೇ ಅಲ್ಲಲ್ಲಿ ದಂಗೆಗಳು ಶುರುವಾಗಿದ್ದವು. ಹಾಗಾಗಿಯೇ ನಿಶಸ್ತ್ರಿಕರಣ ಕಾಯಿದೆಯನ್ನು ಬ್ರಿಟಿಷ್ ಸರ್ಕಾರ ಜಾರಿಗೆ ತಂದಿತ್ತು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದ್ದ ವೇಳೆಗೆ, ಕರ್ನಾಟಕದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಸಹ ನಿಶಸ್ತ್ರೀಕರಣದ ವಿರುದ್ಧ ಅದಾಗ್ಲೇ ಹೋರಾಟ ನಡೆಸಿದ್ದರು. ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಸವಾಲ್ ಆಗಿ ಪರಿಣಮಿಸಿದ್ದರು. ಬ್ರಿಟಿಷರು ಜಾರಿಗೆ ತಂದಿದ್ದ ನಿಶಸ್ತ್ರಿಕರಣದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು, ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದುಬಿಟ್ಟಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ.

1857 ನವೆಂಬರ್ 27 ರಂದು ನಡೆದ ಬ್ರಿಟಿಷರ ವಿರುದ್ಧದ ಕಾಳಗದಲ್ಲಿ ಹಲಗಲಿ ಬೇಡರು ಜಯ ಸಾಧಿಸಿದ್ದರು. ಸೋತು ಸುಣ್ಣವಾಗಿದ್ದ ಬ್ರಿಟಿಷ್ ಅಧಿಕಾರಿಗಳು, ಇವರನ್ನು ಮಣಿಸುವುದಕ್ಕೆ ಕುತಂತ್ರ ಹೂಡಿದ್ದರು .ಇದಕ್ಕಾಗಿ 1857 ನವೆಂಬರ್ 29 ರಂದು ಬೆಳಗಾವಿ, ಬಿಜಾಪುರ, ಹಾಗೂ ಜಿಲ್ಲಾ ಕೇಂದ್ರವಾಗಿದ್ದ ಕಲಾದಗಿಯಿಂದ ಕಂಪನಿಯ ಭಾರಿ ಸೈನ್ಯದೊಂದಿಗೆ ಮಧ್ಯರಾತ್ರಿ ಹಲಗಲಿ ಗ್ರಾಮಕ್ಕೆ ನುಗ್ಗಿ ದಾಳಿ ನಡೆಸಿದರು. ಮದ್ದಿನಿಂದ ಮನೆ ದ್ವಂಸ ಮಾಡಿ, ಗ್ರಾಮದ ಅಮಾಯಕರ ಮೇಲೆ ಹಲ್ಲೆ ನಡೆಸಿ, ದಾಳಿ ವೇಳೆ ಸೆರೆ ಸಿಕ್ಕ 25 ಜನರಲ್ಲಿ ಪ್ರಮುಖ 11 ಜನರನ್ನು ಮುಧೋಳ ಗಾಂಧಿ ಚೌಕ್(ಈಗಿನ ಉತ್ತೂರು ಸರ್ಕಲ್)ನಲ್ಲಿ ಬಹಿರಂಗವಾಗಿ ಸಂತೆ ದಿನ ಗಲ್ಲಿಗೇರಿಸಲಾಗಿತ್ತು. ಹೀಗೆ ಗಲ್ಲಿಗೇರಿದ 11 ಜನರಲ್ಲಿದ್ದ ಪ್ರಮುಖರೆಂದರೆ ಜಡಗಣ್ಣ ಮತ್ತು ಬಾಲಣ್ಣ.

ಇದನ್ನೂ ಓದಿ | Amrit Mahotsav | ಮಸಿಬಿನಾಳದ ಸ್ವಾತಂತ್ರ್ಯ ಹೋರಾಟಗಾರರು; ಮಠದಲ್ಲಿ ಮೊಳಗಿದ ಸಮರ ಗೀತೆ!

ಅಂದು ಬ್ರಿಟಿಷರು ನಡೆಸಿದ್ದ ದಾಳಿ ವೇಳೆ ಅನೇಕ ಸಾವು ನೋವು ಸಂಭವಿಸಿದ್ದವು. ಸತತವಾಗಿ ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾ ಬಂದಿದ್ದ ಜಡಗಣ್ಣ ಮತ್ತು ಬಾಲಣ್ಣ ಕತ್ತಿ ಝಳಪಿಸುತ್ತಲೇ ಗಲ್ಲಿಗೆ ಶರಣಾಗಿದ್ದರು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಹೋರಾಡಿದ ಈ ವೀರರ ಸಾಹಸಗಾಥೆ ಇವತ್ತಿಗೂ ಸಹ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾಗಿರುವ ಹಲಗಲಿ ಬೇಡರ ಇತಿಹಾಸ ಬಹು ರೋಚಕ. ಹಲಗಲಿ ಬೇಡರ ಹತಾರ ಲಡಾಯಿಯ ಪ್ರಮುಖರಾಗಿದ್ದ ಜಡಗಾ ಮತ್ತು ಬಾಲಾ ಅವರ ಪ್ರತಿಮೆಗಳು ಇದೀಗ ಹಲಗಲಿ ಗ್ರಾಮದಲ್ಲಿ ವೀರಾಜಮಾನವಾಗಿವೆ.

ಆದರೆ ಕಂಚಿನ ಪ್ರತಿಮೆಗಳನ್ನು ನಿರ್ಮಿಸಿ ಇವರ ಇತಿಹಾಸ, ದೇಶಪ್ರೇಮವನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕಾರ್ಯಗಳು ಆಗಬೇಕಿದೆ. ಇತಿಹಾಸದ ವೀರೋಚಿತ ಘಟನೆಗಳ ಕುರಿತು ಸ್ಮರಿಸುವ ಬಾಲಣ್ಣನರ ವಂಶಸ್ಥರು, “ಅವರ ಹೆಸರು ಕೇಳಿದರೆ ನಮಗೆ ರೋಮಾಂಚನ ಆಗುತ್ತದೆ. ಜತೆಗೆ ಸ್ವತಂತ್ರ್ಯಕೋಸ್ಕರ ಹೋರಾಟ ನಡೆಸಿದ್ದಾರೆ. ಹಿಂದಿನ ಪೀಳಿಗೆಗೆ ಅವರು ಪ್ರೇರಣೆ ಆಗಿದ್ದಾರೆ. ಯಾವುದೇ ಸೈನ್ಯ ಇಲ್ಲದೆಯೇ ಬ್ರಿಟಿಷರ ವಿರುದ್ಧ ಹೋರಾಡಿದ್ದಾರಲ್ಲಾ ಎಂಬ ಸಂಗತಿ ನಮಗೆ ಹೆಮ್ಮೆ ಅನಿಸುತ್ತದೆʼʼ ಎಂದು ಬಾಲಣ್ಣರ ವಂಶಸ್ಥ ವಿನೋದ್.  

ಬೇಡರ ಮುಂದೆ ಸೋಲು ಕಂಡಿದ್ದ ಬ್ರಿಟಿಷರು

ಎರಡು ಬಾರಿ ಜಡಗಣ್ಣ ಮತ್ತು ಬಾಲಣ್ಣ ವಿರುದ್ಧ ಸೋಲು, ಅವಮಾನದ ಸೇಡಿನಲ್ಲಿ ಬೆಂದಿದ್ದ ಬ್ರಿಟಿಷರು, ಭಾರಿ ಸೇನೆಯೊಂದಿಗೆ ನುಗ್ಗಿ, ಗ್ರಾಮವನ್ನು ಲೂಟಿ ಮಾಡಿದ್ದರು. ಸಿಕ್ಕ ಸಿಕ್ಕವರನ್ನು ಕೊಲೆ ಮಾಡುತ್ತಾ, ಕಡೆಗೆ ಇಡೀ ಊರಿಗೆ ಬೆಂಕಿ ಹಚ್ಚಿ ಗ್ರಾಮವನ್ನು ಸುಟ್ಟಿದ್ದರು.

ಈ ವೇಳೆ ಬ್ರಿಟಿಷರ ನಿದ್ದೆಗೆಡಿಸಿದ್ದ ಜಡಗಾ, ಬಾಲಾ ಸೇರಿ ಹಲವರನ್ನು ಮುಧೋಳ ನಗರದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದರು. ಆ ಮೂಲಕ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದಯಂತೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಕಂಪನಿ ಸರ್ಕಾರ ಮಾಡಿತ್ತು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ದಂಗೆ ಎದ್ದು, ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ, ಪ್ರಾಣ ತ್ಯಾಗಕ್ಕೂ ಸಿದ್ದ ಎನ್ನುವ ಸಂದೇಶ ಸಾರಿ, ಕೊನೆಗೆ ಗೆಲ್ಲಿಗೇರಿದ ಹಲಗಲಿಯ ಜಡಗಣ್ಣ ಮತ್ತು ಬಾಲಣ್ಣನವರ ಸಾಹಸಗಾಥೆಯೇ ರೋಮಾಂಚನಕಾರಿ.

ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ

ವೀರ ಯೋಧರನ್ನು ಗಲ್ಲಿಗೆ ಹಾಕಿರುವ ಮುಧೋಳ ನಗರದ ಪ್ರದೇಶದಲ್ಲಿ ವೀರರ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಅಲ್ಲದೇ ಯುದ್ಧ ಮಾಡಿದ ಸ್ಥಳದಲ್ಲಿ ಕೆಲ ಕುರುಹುಗಳಿವೆ. ಅವನ್ನೆಲ್ಲಾ ಸರ್ಕಾರ ಸಂರಕ್ಷಿಸಿ, ಮ್ಯೂಸಿಯಂ ಮಾಡಿ ಜನತೆಗೆ ಜಡಗಣ್ಣ ಮತ್ತು ಬಾಲಣ್ಣನ ಧೈರ್ಯ, ಸ್ಥೈರ್ಯ ಹಾಗೂ ಸಾಹಸದ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರಾದವೆಂಕಟೇಶ್ ಲೋಕಾಪುರ ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬರಲು, ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲಗಲಿ ಬೇಡರಂತೆ ಲಕ್ಷಾಂತರ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರ ತ್ಯಾಗ, ಬಲಿದಾನದಿಂದಾಗಿ ದೇಶ ಇಂದು ಸ್ವಾತಂತ್ರ್ಯವಾಗಿದೆ. ಅಂತಹ ಮಹನಿಯರ ಬಗ್ಗೆ ಇಂದಿನ ಯುವಪೀಳಿಗೆಗೆ ಹೆಚ್ಚೆಚ್ಚು ತಿಳಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಆ ನಿಟ್ಟಿನಲ್ಲಿ ದೇಶಕ್ಕಾಗಿ ಪ್ರಾಣವನ್ನು ಬಲಿಕೊಟ್ಟಿರುವ ವೀರರು, ಹುತಾತ್ಮರನ್ನು ನೆನಪಿಸುವ ನಿಟ್ಟಿನಲ್ಲಿ ಅವರು ಬಾಳಿ, ಬದುಕಿದ ಪ್ರದೇಶಗಳು, ಜಾಗಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಗಳು ಮುಂದಾಗಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯ.

ಇದನ್ನೂ ಓದಿ | Azadi Ka Amrit Mahotsav | ಬ್ರಿಟಿಷರ ವಿರುದ್ಧ ಸಿಂಹಗರ್ಜನೆ‌ ಮಾಡಿದ್ದ ಮುಂಡರಗಿ ಭೀಮರಾಯ!

Exit mobile version