ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ. ಆದರೆ ಈ ಸಂಭ್ರಮ ವಿಜಯಪುರದ ಜಿಲ್ಲೆಯ ಚಡಚಣ ತಾಲೂಕಿನ ಜನರಿಗೆ ಇಲ್ಲ. ಕಾರಣ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀ ಅವರನ್ನ ಅಲ್ಲಿನ ಜಿಲ್ಲಾಡಳಿತ ಹಾಗೂ ಸರ್ಕಾರ ಮರೆತು ಬಿಟ್ಟಿದೆ.
ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಮಠಾಧೀಶರ ಸ್ವಾತಂತ್ರ್ಯ ಹೋರಾಟ ಮರೆತಿರುವ ಸರ್ಕಾರದ ವಿರುದ್ಧ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಚಗೇರಿ ಮಠ ಒಂದು ಜಾತ್ಯತೀತ ಮಠವಾಗಿದ್ದು, ಮಾಧವಾನಂದ ಪ್ರಭುಜೀ ಜೀವಿತಾವಧಿಯ ತುಂಬೆಲ್ಲ ಮಾಡಿದ್ದು ಬ್ರಿಟಿಷರ ವಿರುದ್ಧದ ಹೋರಾಟ. ತಮ್ಮ ಮಠದ ಸಾವಿರಾರು ಭಕ್ತರನ್ನ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎನ್ನುವುದು ಸ್ಥಳೀಯರ ವಿವರಣೆ.
ಇದನ್ನೂ ಓದಿ | Yoga Day 2022: ವಿಜಯಪುರದಲ್ಲಿ ಯೋಗ ದಿನಾಚರಣೆಗೆ ಹಲವು ಕಾರ್ಯಕ್ರಮ
ಇವರ ಉಗ್ರ ಸ್ವರೂಪದ ಹೋರಾಟವನ್ನು ಕಂಡ ಬ್ರಿಟಿಷ್ ಅಧಿಕಾರಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದರು. ಆದರೆ ಸತ್ತರೆ ಸ್ವರ್ಗವು, ಗೆದ್ದರೇ ರಾಜ್ಯವು ಎಂದು, ಭಾರತ ಮಾತೆಯನ್ನು ಪರಕೀಯರ ಕಪಿ ಮುಷ್ಟಿಯಿಂದ ಸ್ವತಂತ್ರಗೊಳಿಸಲು ಪ್ರಾಣವನ್ನೇ ಪಣವಾಗಿಟ್ಟಿದ್ದರು. ಇದಕ್ಕಾಗಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತು ಹಾಕಿ ಠಾಣೆಗಳನ್ನು ಧ್ವಂಸಗೊಳಿಸಿದ್ದರು. ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಮಾಧವಾನಂದ ಪ್ರಭುಜೀ ಕುರಿತಾಗಿ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಭಕ್ತರಲ್ಲಿ ನೋವು ತರಿಸಿದೆ.
ಪ್ರಭುಜಿಗಳ ಪವಾಡ
27 ಬಾರಿ ಜೈಲು ವಾಸ ಅನುಭವಿಸಿದ್ದ ಮಾಧವಾನಂದರು, ಸ್ವಾತಂತ್ರ್ಯ ಹೋರಾಟಕ್ಕಾಗಿ ಭಕ್ತರನ್ನ ಒಟ್ಟುಗೂಡಿಸಲು ತಮ್ಮ ವಾಹನದಲ್ಲಿ ಹೊರಟಿದ್ದಾಗ ಗೋಕಾಕ್ ಬಳಿ ಬ್ರಿಟಿಷ್ ಪೊಲೀಸರು ಗುಂಡು ಹಾರಿಸಿದರು. ಹಲವು ಸುತ್ತು ಗಂಡು ಹಾರಿಸಿ ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಭುಜಿಗಳ ಪವಾಡ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಚಮತ್ಕಾರವನ್ನ ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ಯಾವತ್ತೂ ಅವರ ಮೇಲೆ ಗುಂಡು ಹಾರಿಸುವ ಪ್ರಯ್ನಕ್ಕೆ ಹೋಗಲಿಲ್ಲವಂತೆ.
ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನ ದೇವರು ಎಂದೇ ಸಂಬೋಧಿಸುತ್ತಿದ್ದರು. ಈಗಲೂ ಮಠದಲ್ಲಿ ಆ ಪರಂಪರೆ ಜಾರಿಯಲ್ಲಿದೆ. ಇಂತಹ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿ ಅವರ ದೇಶ ಪ್ರೇಮವನ್ನು ಸರ್ಕಾರ ಮರೆತಿದೆ. ಈ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಥೈಲ್ಯಾಂಡ್‌ನಲ್ಲಿ ಬಂಗಾರದ ಪದಕ ಗೆದ್ದ ವಿಜಯಪುರದ ಕುಸ್ತಿಪಟು