Site icon Vistara News

Azan at DC office: ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಜಾನ್‌; ಬಜರಂಗದಳ ಪ್ರತಿಭಟನೆ, ಗೋಮೂತ್ರ ಸಿಂಪಡನೆ

Azan at DC office Bajrang Dal protests and spraying of cow urine

ಶಿವಮೊಗ್ಗ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಯುವಕನೊಬ್ಬ ಆಜಾನ್ (Azan at DC office) ಕೂಗಿ ಉದ್ದಟತನ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ತೀವ್ರ ಪ್ರತಿಭಟನೆಯನ್ನು ನಡೆಸಿದ್ದಾರೆ. ಸೋಮವಾರ (ಮಾ. 20) ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೆ, ಆಜಾನ್‌ ಕೂಗಿದ ಜಾಗದಲ್ಲಿ ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಕಾರ್ಯವನ್ನು ನೆರವೇರಿಸಿದರು.

ಆಜಾನ್ ಹಾಗೂ ಅಲ್ಲಾಹು ಬಗ್ಗೆ ಮಾಜಿ‌ ಸಚಿವ ಈಶ್ವರಪ್ಪ ಅವಹೇಳನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಸ್ಲಿಂ ಸಮುದಾಯದವರು ಮೂರು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮುಸ್ಲಿಂ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್‌ ಕೂಗಿ ಉದ್ದಟತನ ಪ್ರದರ್ಶಿಸಿದ್ದ. ಇದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆಜಾನ್‌ ಕೂಗಿದ್ದ ವಿಡಿಯೊ ವೈರಲ್‌ (Video Viral) ಆಗಿತ್ತು. ಈಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: Yuva Kranti: ರಾಜ್ಯಕ್ಕೆ ಬರುವ ಮೋದಿ ಕೇವಲ ಭಾವನಾತ್ಮಕ ಮಾತಾಡುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

ಮುಸಲ್ಮಾನರು ಮತಾಂಧತೆ ಹರಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಬಜರಂಗದಳ ಕಾರ್ಯಕರ್ತರು, ಗೂಂಡಾ ಮುಸಲ್ಮಾನರು ಎಂದು ಘೋಷಣೆ ಕೂಗಿದ್ದಾರೆ. ಸಂವಿಧಾನ ವಿರೋಧಿ ಎಸ್‌ಡಿಪಿಐ ನಾಯಿಗಳಿಗೆ ಧಿಕ್ಕಾರ ಎಂದು ಕೀಳು ಪದದಲ್ಲಿ ಘೋಷಣೆ ಕೂಗಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಗೋಮೂತ್ರವನ್ನು ಸಿಂಪಡಣೆ ಮಾಡಿದ ಬಜರಂಗದಳ ಕಾರ್ಯಕರ್ತರು

ಪೊಲೀಸರು-ಕಾರ್ಯಕರ್ತರ ನಡುವೆ ವಾಗ್ವಾದ

ಇದೇ ವೇಳೆ ಆಜಾನ್‌ ಕೂಗಿದ ಜಾಗಕ್ಕೆ ಬಂದ ಬಜರಂಗದಳ ಕಾರ್ಯಕರ್ತರು ಗೋಮೂತ್ರ ಸಿಂಪಡಣೆಗೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗೋಮೂತ್ರ ಸಿಂಪಡಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡದ ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡಿದ್ದಾರೆ. ಆದರೂ ಕಾರ್ಯಕರ್ತರು ಗೋಮೂತ್ರವನ್ನು ಸಿಂಪಡಿಸಿದರು. ಈ ವೇಳೆ ಪೊಲೀಸರು-ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಮತಾಂಧ ಮುಸಲ್ಮಾನರಿಗೆ ಧಿಕ್ಕಾರವೆಂದ ಬಜರಂಗದಳ

ಈ ವೇಳೆ, ರಾಮನ ಮಕ್ಕಳು ನಾವೆಲ್ಲ, ಬಾಬರ್ ಸಂತತಿ ಬೇಕಿಲ್ಲ. ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಧಿಕ್ಕಾರ ಎಂದು ಘೋಷಣೆ ಕೂಗಲಾಯಿತು.

ಇದನ್ನೂ ಓದಿ: Tippu sultan : ಉರಿ ಗೌಡ, ನಂಜೇಗೌಡರು ಕಾಲ್ಪನಿಕ ಪಾತ್ರ ಅಂದವರಿಗೆ ಮಂಗಳಾರತಿ ಆಗಿದೆ ಎಂದ ಸಿ.ಟಿ ರವಿ

ಅಮಿತ್‌ ಶಾ, ಸಿಎಂಗೆ ಪತ್ರ ಬರೆಯುವೆ

ಎಸ್‌ಡಿಪಿಐ ಕೋಮು ಸೌಹಾರ್ದವನ್ನು ಹಾಳು ಮಾಡುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಆಜಾನ್ ಕೂಗಿದ್ದಾರೆ. ವಿಧಾನಸೌಧದೆದುರು ಕೂಗುವುದಾಗಿ ಸೊಕ್ಕಿನ ಮಾತನ್ನಾಡಿದ್ದಾರೆ. ಇದು ಸಂವಿಧಾನ ವಿರೋಧಿ ಕ್ರಮ. ಸುಪ್ರೀಂ ಕೋರ್ಟ್ ಆಜಾನ್ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ವಿರಾಜಪೇಟೆಯಲ್ಲಿ ನಾನು ಭಾಷಣ ಮಾಡುವಾಗ ಆಜಾನ್ ಕೂಗಿದರು. ಮಂಗಳೂರಿನಲ್ಲೂ ಹೀಗೆಯೇ ಮಾಡಿದರು. ಆಗಲೇ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೆ. ಇದರ ವಿರುದ್ಧ ಕ್ರಮ ಆಗಬೇಕು ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಆಜಾನ್ ಕೂಗಿದವರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳಬೇಕಿತ್ತು.‌ ಆದರೆ, ಸೆಕ್ಷನ್ 107 ವಿಧಿಸಿ ಬಿಡುಗಡೆ ಮಾಡಲಾಗಿದೆ. ವಿಧಾನಸೌಧದಲ್ಲೂ ಆಜಾನ್ ಕೂಗುವುದಾಗಿ ಹೇಳಿದ್ದು ರಾಷ್ಟ್ರ ದ್ರೋಹವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ. ಎಸ್‌ಡಿಪಿಐ, ಪಿಎಫ್‌ಐ, ಅಂಜುಮನ್ ಎಲ್ಲವೂ ಒಂದೇ. ಪಿಎಫ್ಐ ನಿಷೇಧ ಆಗಿದೆ. ಹೀಗಾಗಿ ಬೇರೆ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ. ಅಲ್ಲಾಹುಗೆ ಅಪಮಾನ ಮಾಡುತ್ತಿರುವುದು ಅವರು. ನಾಲ್ಕು ಮೈಕ್ ಹಾಕಿ ಆಜಾನ್ ಹೇಳುತ್ತಾರೆ. ಮೈಕಲ್ಲಿ ಕೂಗಿದ್ರೆ ಅಲ್ಲಾಹುಗೆ ಕೇಳುತ್ತೇನು? ಹೀಗೆ ಆಜಾನ್‌ ಕೂಗಿದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಪರೀಕ್ಷೆಗಾಗಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಆಜಾನ್ ಕೂಗುವವರು ನಮ್ಮ ದೇಶದಲ್ಲಿ ಇದ್ದಾರೋ, ಪಾಕಿಸ್ತಾನದಲ್ಲೋ? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.

ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ನಾನು ಟೀಕೆ ಮಾಡಲ್ಲ. ಸಿಎಂ ಸ್ಥಾನದಲ್ಲಿದ್ದವರು ಇಂಥದ್ದನ್ನು ಸಮರ್ಥನೆ ಮಾಡೋದು ಸರೀನಾ? ಎಲ್ಲ ಕುರಿತು ಜ್ಞಾನ ಇದ್ದೂ ಕುಮಾರಸ್ವಾಮಿ ಮಾತನಾಡಿದ್ದು ಯಾಕೆ? ನಾನು ಹಿಂದುತ್ವವಾದಿ ಎಂದು ಹೇಳಿದರು.

Exit mobile version