ಬಾಗಲಕೋಟೆ: ಗರ್ಭಿಣಿಯರಿಗೆ ಬಂಧು ಬಳಗ, ಆಪ್ತರು ಸೇರಿ ಸೀಮಂತ ಮಾಡಿ ಸಂಭ್ರಮಿಸುತ್ತಾರೆ. ಆದರೆ, ಇಲ್ಲೊಂದು ಕಡೆ ತಮ್ಮ ಮುದ್ದಿನ ನಾಯಿಗೆ ಕಲಾವಿದೆಯರಿಬ್ಬರು ಸೀಮಂತ ಮಾಡಿ ಗಮನ ಸೆಳೆದಿದ್ದಾರೆ.
ಹೌದು, ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ನಾಟಕ ಕಲಾವಿದೆ ಜ್ಯೋತಿ ಗುಳೇದಗುಡ್ಡ ತಮ್ಮ ಮುದ್ದಿನ ನಾಯಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಜ್ಯೋತಿ ಗುಳೇದಗುಡ್ಡ ನಾಟಕ ಕಲಾವಿದೆಯಾಗಿದ್ದು, ಕಳೆದ ಎರಡು ವರ್ಷದಿಂದ ಚಿಂಕಿ, ಮಿಂಕಿ ಎಂಬ ಎರಡು ನಾಯಿಗಳನ್ನು ಸಾಕ್ಕಿದ್ದರು. ಇದರಲ್ಲಿ ಚಿಂಕಿ ಹೆಣ್ಣು ನಾಯಿ, ಮಿಂಕಿ ಗಂಡು. ಚಿಂಕಿ ಗರ್ಭಿಣಿಯಾದಾಗ ಕಳೆದ ಎಂಟು ದಿನಗಳ ಹಿಂದೆ ಎಲ್ಲ ಕುಟುಂಬಸ್ಥರು ಸೇರಿ ಸಂಭ್ರಮದಿಂದ ಅದಕ್ಕೆ ಸೀಮಂತ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ | ಸಾಲ ಮರುಪಾವತಿಸಲು ವಿನಾಯಿತಿ ನೀಡಿ ಎಂದು ಸರ್ಕಾರಕ್ಕೆ ರೈತರ ಮನವಿ
ಗರ್ಭಿಣಿಗೆ ಹೊಸ ಸೀರೆ ಉಡಿಸಿ ಸಿಂಗಾರ ಮಾಡಿ, ಹಣ್ಣು ಹಂಪಲುಗಳನ್ನು ಇಟ್ಟು ಯಾವ ರೀತಿ ಸೀಮಂತ ಮಾಡುತ್ತಾರೋ ಅದೇ ರೀತಿ ನಾಯಿಗೂ ಸೀರೆ ಉಡಿಸಿ, ಹಣೆಗೆ ಕುಂಕುಮ ಹಚ್ಚಿ, ಕೈಗೆ ಬಳೆ ತೊಡಿಸಿ ಸೀಮಂತ ಮಾಡಿದ್ದಾರೆ. ಅಕ್ಕಪಕ್ಕದ ಮಹಿಳೆಯರನ್ನು ಕರೆದು ಶ್ವಾನಕ್ಕೆ ಆರತಿ ಮಾಡುವ ಮೂಲಕ ಸೀಮಂತ ಮಾಡಿದ್ದಾರೆ. ಶ್ವಾನವನ್ನು ಕುರ್ಚಿ ಮೇಲೆ ಕೂರಿಸಿ ಅದಕ್ಕೆ ಸೆಕೆ ಆಗಬಾರದು ಅಂತ ಮುಂದೆ ಫ್ಯಾನ್‌ಗಳನ್ನು ಇಟ್ಟು ಆರೈಕೆ ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಚಿಂಕಿ ಆರು ಮರಿಗಳಿಗೆ ಜನ್ಮ ನೀಡಿದೆ, ಎಲ್ಲ ನಾಯಿಮರಿಗಳು ಆರೋಗ್ಯವಾಗಿದ್ದು ಇವರ ಮನೆಯಲ್ಲಿ ಮತ್ತಷ್ಟು ಸಂಭ್ರಮ ಮನೆ ಮಾಡಿದೆ. ಒಟ್ಟಿನಲ್ಲಿ ಮುದ್ದಾದ ಶ್ವಾನಕ್ಕೆ ಸೀಮಂತ ಮಾಡಿಸುವ ಮೂಲಕ ಕಲಾವಿದೆ ಶ್ವಾನ ಪ್ರೀತಿ ಮೆರೆದಿದ್ದಾರೆ. ಇವರ ಶ್ವಾನ ಪ್ರೀತಿ ಸೀಮಂತ ಕಾರ್ಯ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ | ಮಕ್ಕಳ ಕಥೆ: ನಾಯಿಗಳಿಗೆ ನಮ್ಮೊಂದಿಗೆ ಸ್ನೇಹವೇಕೆ?