Site icon Vistara News

ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ 77 ಚಿನ್ನದ ಪದಕ ಪ್ರದಾನ

Bagalkote horticulture university

ಬಾಗಲಕೋಟೆ: ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಬುಧವಾರ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಚಿನ್ನದ ಪದಕ ನೀಡಿ ಗೌರವಿಸಿದರು.

ಉಮ್ಮೇಸಾರಾ ಹಸ್ಮತ್‌ಅಲಿ

ಒಟ್ಟು 680 ವಿದ್ಯಾರ್ಥಿಗಳಲ್ಲಿ 475 ಸ್ನಾತಕೋತ್ತರ ಪದವೀಧರರು(ತೋಟಗಾರಿಕೆ), 23 ಬಿ.ಟೆಕ್ ಆಹಾರ ತಂತ್ರಜ್ಞಾನ, 137 ಮಂದಿಗೆ ಸ್ನಾತಕೋತ್ತರ(ತೋಟಗಾರಿಕೆ) ಪದವಿ, 45 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಸತ್ತಿಹಳ್ಳಿ ಗ್ರಾಮದ ಉಮ್ಮೇಸಾರಾ ಹಸ್ಮತ್‌ಅಲಿ ಬಿಎಸ್ಸಿ ತೋಟಗಾರಿಕೆಯಲ್ಲಿ 16 ಚಿನ್ನದ ಹಾಗೂ ತೋಟಗಾರಿಕೆ ಹಣ್ಣು ವಿಜ್ಞಾನ ವಿಭಾಗದಲ್ಲಿ ಹಾಸನದ ಮೇಘಾ 4 ಚಿನ್ನದ ಪದಕ ಪಡೆದು ಗಮನ ಸೆಳೆದರು.

ಸ್ನಾತಕೋತ್ತರ ವಿಭಾಗದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಯಿಂದ 25 ಚಿನ್ನದ ಪದಕ ಹಾಗೂ ದಾನಿಗಳು ನೀಡುವ 52 ಚಿನ್ನದ ಪದಕ ಸೇರಿ ಒಟ್ಟು 77 ಚಿನ್ನ ಪದಕಗಳನ್ನು ಘಟಿಕೋತ್ಸವದಲ್ಲಿ ವಿತರಿಸಲಾಯಿತು.

ಎಚ್‌. ಏಕಾಂತಯ್ಯಗೆ ಗೌರವ ಡಾಕ್ಟರೇಟ್‌
ಬಾಗಲಕೋಟೆ ತೋಟಗಾರಿಕೆ ವಿವಿಯಿಂದ ಘಟಿಕೋತ್ಸವದಲ್ಲಿ ಮೊದಲ ಡಾಕ್ಟರೇಟ್‌ ಪದವಿಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಎಚ್. ಏಕಾಂತಯ್ಯ ಅವರಿಗೆ ನೀಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಪಿಎಚ್‌ಡಿ ಪದವಿ ಪ್ರಧಾನ ಮಾಡಿದರು. ಸಚಿವ ಮುನಿರತ್ನ, ಶಾಸಕ ವೀರಣ್ಣ ಚರಂತಿಮಠ, ಕುಲಪತಿ ಡಾ. ಕೆ. ಇಂದಿರೇಶ ಮತ್ತಿತರರು ಭಾಗಿಯಾಗಿದ್ದರು.

Exit mobile version