ಬಾಗಲಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ, ದಲಿತರಿಗೆ ಜಾತಿನಿಂದನೆ ಮಾಡಿ ದೌರ್ಜನ್ಯ (Atrocity Case) ನಡೆಸಿರುವ ಸವರ್ಣೀಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಜಾತಿನಿಂದನೆಗೊಳಗಾದ ಕುಟುಂಬಸ್ಥರಿಂದ ಜಮ್ಮನಕಟ್ಟಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.
ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಡಿಸೆಂಬರ್ 12ರಂದು ಸವರ್ಣೀಯರು ಹಾಗೂ ದಲಿತ ಕುಟುಂಬವೊಂದರ ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಈ ವೇಳೆ ಸವರ್ಣೀಯರು, ಬ್ಯಾನರ್ ಹರಿದು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮದ ದಲಿತ ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮ್ಮನಕಟ್ಟಿ ಗ್ರಾಮದಿಂದ ಪಾದಯಾತ್ರೆಯಲ್ಲಿ ತೆರಳಿದ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಗೂ ಜಾತಿನಿಂದನೆಗೊಳಗಾದ ಕುಟುಂಬಸ್ಥರು, ಹಲಗೆ ಬಾರಿಸುತ್ತಾ ಧಿಕ್ಕಾರ ಘೋಷಣೆ ಕೂಗುತ್ತಾ, ದೌರ್ಜನ್ಯ ನಡೆಸಿದವರ ವಿರುದ್ಧ ಜಿಲ್ಲಾಧಿಕಾರಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Attempt To Murder | ಶಿವಮೊಗ್ಗದಲ್ಲಿ ಮತ್ತೆ ಚೂರಿ ಇರಿತ; ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು