ಜಮಖಂಡಿ: ದೇಶಾದ್ಯಂತ 30,000 ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನು ನಿರ್ಮಿಸಲಾಗಿದೆ. ಈಗ ನಮ್ಮ ದೇವಾಲಯಗಳನ್ನು ಮರಳಿ ಕೇಳುವ ಕಾಲ ಬಂದಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಜಮಖಂಡಿಯಲ್ಲಿ ಅವರು ಮಾತನಾಡಿದರು. ಇಡೀ ದೇಶದಲ್ಲಿ ಮೂವತ್ತು ಸಾವಿರ ದೇವಾಲಯಗಳನ್ನು ಒಡೆದು ಮಸೀದಿ ನಿರ್ಮಿಸಿರುವ ದಾಖಲೆಗಳಿವೆ. ಯಾವ ಮುಸ್ಲಿಂ ರಾಜ ಯಾವ ದೇವಸ್ಥಾನದ ಮೇಲೆ ದಾಳಿ ಮಾಡಿದ ಎಂಬುದರ ಬಗ್ಗೆ ಇತಿಹಾಸ ಪುಸ್ತಕಗಳೂ ಬಂದಿವೆ. 30 ಸಾವಿರ ದೇವಸ್ಥಾನ ಬೇಡ, ನಮಗೆ ಮೂರೇ ಮೂರು ದೇವಸ್ಥಾನ ಕೊಡಿ, ಅಯೋಧ್ಯೆ, ಮಥುರಾ ಮತ್ತು ಕಾಶಿ ಎಂದು 1983ರಲ್ಲಿ ಅಶೋಕ ಸಿಂಘಾಲ್ ಅವರು ಮುಸ್ಲಿಂ ಮುಖಂಡರಿಗೆ ಹೇಳಿದರು. ಅಂದಿನ ಕಾಂಗ್ರೆಸ್ ಸರಕಾರವೂ ಇದನ್ನು ಒಪ್ಪಲಿಲ್ಲ. ಮುಸ್ಲಿಂ ಸಮುದಾಯವೂ ಧಿಕ್ಕರಿಸಿತು. ಅದರ ಪರಿಣಾಮ ಅಯೋಧ್ಯೆಯ ಕುರಿತು ಹೊರಗೆ ಹಾಗೂ ಕಾನೂನು ಹೋರಾಟ ಆದವು. ಈಗ ಅಯೋಧ್ಯೆ ಹಿಂದುಗಳ ಕೈಗೆ ಸೇರಿದೆ. ಇದೇ ಮಾದರಿಯಲ್ಲಿ ಕಾಶಿ, ಮಥುರಾ ಕೋರ್ಟ್ ಪ್ರಕ್ರಿಯೆ ಪ್ರಾರಂಭ ಆಗಿದೆ. ಇದಕ್ಕೆ 1991ರ ಕಾಯಿದೆ ಅಡ್ಡಿ ಬರುತ್ತಿದೆ. ಇದು ರಾಜೀವ್ ಗಾಂಧಿ ಮಾಡಿದ ಅಪರಾಧ. ಕಾಯಿದೆ ರದ್ದಾಗುವ ವರೆಗೂ ಈಗ ಎದ್ದಿರುವ ದೇವಸ್ಥಾನಗಳ ವಿವಾದ ಹಾಗೆಯೇ ಉಳಿಯುತ್ತವೆ. ಕೇಂದ್ರ ಸರಕಾರ 1991ರ ಕಾನೂನನ್ನು ರದ್ದು ಮಾಡಬೇಕು ಎಂದು ಮುತಾಲಿಕ್ ಹೇಳಿದರು.
ದಾಳಿಕೋರರು, ಲೂಟಿಕೋರರ ಪರವಾಗಿ ಈ ದೇಶದ ಮುಸ್ಲಿಮರು ನಿಲ್ಲಬಾರದು. ಬಾಬರ್, ಔರಂಗಜೇಬ್, ಅಕ್ಬರ್ ಪರವಾಗಿ ನಿಲ್ಲಬಾರದು. ಅವರು ದೇಶದ್ರೋಹಿಗಳು. ಅವರಿಗೂ ಈ ದೇಶದ ಮುಸ್ಲಿಮರಿಗೂ ಯಾವುದೇ ಸಂಬಂಧ ಇಲ್ಲ. ಶ್ರೀರಂಗಪಟ್ಟಣದ ಮಸೀದಿ ನೋಡಿದ ಕೂಡಲೇ ಗೊತ್ತಾಗುತ್ತದೆ ಅದು ದೇವಸ್ಥಾನ ಎಂದು. ಹಿಂದೆ ಮಾಡಿದ ತಪ್ಪು ಮಾಡಬೇಡಿ, ನಮ್ಮ ದೇವಸ್ಥಾನ ಕಬಳಿಸಬೇಡಿ ಎಂದು ಹೇಳಿದರು.
ಮೋದಿ ವಿಚಾರ ಮಂಚ್ ಈ ಕುರಿತು ಹೋರಾಟ ಪ್ರಾರಂಭ ಮಾಡಿದ್ದಾರೆ. ಅವರಿಗೆ ನಮ್ಮ ಬೆಂಬಲ ಸಂಪೂರ್ಣ ಇದೆ. ಈ ದೇಶದಲ್ಲಿ ಮಂದಿರ ಒಡೆದಿದ್ದು ಸತ್ಯ. ಮುಸ್ಲಿಮರು ಹಿಂದುಗಳ ಪರವಾಗಿ, ಗೌರವಯುತವಾಗಿ ಆ ಮಂದಿರಗಳನ್ನು ಒಪ್ಪಿಸಬೇಕು. ಹಾಗೆ ಮಾಡಿದರೆ ನಮ್ಮ ನಿಮ್ಮಲ್ಲಿ ಸೌಹಾರ್ದ, ಆನಂದವಾಗಿ ಬದುಕಬಹುದು ಎಂದರು.
ಇದನ್ನೂ ಓದಿ| ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್ ಮಾಡಿ ಎಂದ ಕೋರ್ಟ್