ಬಾಗಲಕೋಟೆ/ವಿಜಯನಗರ/ವಿಜಯಪುರ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ (Rain News) ಜನರು ನಲುಗಿ ಹೋಗಿದ್ದಾರೆ. ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಸಮೀಪದ ರಸ್ತೆ ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ.
ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ಬಾಗಲಕೋಟೆ-ಗದಗ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಮಲಪ್ರಭಾದಿಂದ ನೀರು ಉಕ್ಕಿ ಹರಿಯುತ್ತಿದ್ದು, ಸೇತುವೆ ಮೇಲೆ 5-6 ಅಡಿಗೂ ಅಧಿಕ ನೀರು ಹರಿಯುತ್ತಿದೆ.
ಸತತ ಮಳೆಗೆ ಇಳಕಲ್ ಭಾಗದ ರೈತರು ಕಂಗಾಲಾಗಿದ್ದಾರೆ. ಇಳಕಲ್ ತಾಲೂಕಿನ ಹಿರೆ ಓತಗೇರಿ, ಚಿಕ್ಕ ಓತಗೇರಿ, ವಜ್ಜಲ, ಗೋನಾಳ, ಕಂದಗಲ್ ಮುಂತಾದ ಗ್ರಾಮಗಳಲ್ಲಿ ಮಳೆಯ ಅವಾಂತರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿಯಾದ ಮಳೆಯಿಂದ ಹೆಸರು, ಹತ್ತಿ, ಈರುಳ್ಳಿ ಮುಂತಾದ ಬೆಳೆಗಳು ಜಲಾವೃತವಾಗಿದೆ. ಫಸಲು ಕೈಗೆ ಬರುವ ಹೊತ್ತಿಗೆ ಬೆಳೆ ಹಾನಿಯಾಗಿದೆ.
ಕಾಳಜಿ ಕೇಂದ್ರದಲ್ಲಿ ಶಿಂಗ್ರಿಹಳ್ಳಿ ಗ್ರಾಮಸ್ಥರು
ವಿಜಯನಗರದ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದ ಪರಿಣಾಮ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ಕಾಳಜಿ ಕೇಂದ್ರದಲ್ಲಿ ಹಲವು ಕುಟುಂಬಗಳು ಆಸರೆ ಪಡೆಯುತ್ತಿವೆ. ಕಾಂಗ್ರೆಸ್ ನಾಯಕಿ ಎಂ.ಪಿ.ವೀಣಾ ಮಹಾಂತೇಶ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ಧಾನ್ಯ ಹಾಗೂ ಬಟ್ಟೆ ವಿತರಣೆ ಮಾಡಿದರು.
ಅಧಿಕಾರಿಗಳ ಬೇಜವಾಬ್ದಾರಿಯ ಫಲವಾಗಿ ಮುದ್ದೇಬಿಹಾಳದಿಂದ ತಾಳಿಕೋಟಿಗೆ ಹೋಗುವ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಇಣಚಗಲ್ ಕ್ರಾಸ್‌ನ ಸುತ್ತಮುತ್ತಲಿನ ಫಲವತ್ತಾದ ಜಮೀನುಗಳ ರೈತರು ಕಷ್ಟದಲ್ಲಿ ಸಿಲುಕಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಮುದ್ದೇಬಿಹಾಳ ತಾಲೂಕಿನ ಇಣಚಗಲ್, ಗುಡ್ನಾಳ, ಜಮ್ಮಲದಿನ್ನಿ, ಹೊಕ್ರಾಣಿ ಗ್ರಾಮಗಳ ರೈತರ ಜಮೀನುಗಳು ಇದ್ದು, ಹತ್ತಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬೆಳೆಯಲ್ಲಿ ಕಾಲುವೆಯಿಂದ ತುಂಬಿ ಬಂದಿರುವ ನೀರು ನುಗ್ಗಿ ಜಲಾವೃತವಾಗಿದೆ.
ಇದರಿಂದ ಹತ್ತಿ, ಸೂರ್ಯಕಾಂತಿ, ಕಬ್ಬು ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ನಿಂತಿವೆ. ಬರಲಿರುವ ಕೆಲವು ದಿನಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾದರೆ ಬೆಳೆಗಳೆಲ್ಲ ಕೊಳೆತು ರೈತರ ಬಾಯಿಗೆ ಬರಬೇಕಿರುವ ಬೆಳೆ ಬದಲು ಮಣ್ಣು ಬೀಳುವ ದುಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಿದ್ದಾರೆ ಈ ಭಾಗದ ರೈತರು.
ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದ್ದರೂ ನೀರು ಜಮೀನುಗಳಿಗೆ ನುಗ್ಗಿದಾಗೊಮ್ಮೆ ನೋಡಿಕೊಂಡು ವಾಪಸ್ ಆಗುತ್ತಾರೆ. ಆದರೆ ಪರ್ಯಾಯ ಕ್ರಮವನ್ನು ಕೈಕೊಳ್ಳುತ್ತಿಲ್ಲ ಎನ್ನುವುದು ರೈತರ ಆರೋಪ. ಕಳೆದ ಐದು ವರ್ಷಗಳಿಂದ ಈ ಪರಿಸ್ಥಿತಿ ಇದ್ದರೂ ಯಾರೂ ಸುಧಾರಿಸುವ ಗೋಜಿಗೆ ಹೋಗಿಲ್ಲ. ಜಮ್ಮಲದಿನ್ನಿಯ ರೈತ ಮಡಿವಾಳಪ್ಪ ಮಂಗ್ಯಾಳ ಎಂಬುವರ ಜಮೀನಿನಲ್ಲಿ ಈ ಕಾಲುವೆಯ ನೀರು ನುಗ್ಗುತ್ತಿದ್ದು ಜಮೀನಿನಲ್ಲಿರುವ ಮಣ್ಣು ಕೊಚ್ಚಿ ಹೋಗುತ್ತಿದೆ. ಅಲ್ಲದೇ ಹತ್ತಿ ಬೆಳೆ ಜಲಾವೃತವಾಗಿದೆ.
ಇದನ್ನೂ ಓದಿ | Rain News | ಭೀಕರ ಮಳೆ; ಬುಧವಾರ ಸಾಫ್ಟ್‌ವೇರ್ ಕಂಪನಿಗಳ ಮುಖ್ಯಸ್ಥರ ಜತೆ ಸಚಿವ ಅಶ್ವತ್ಥನಾರಾಯಣ ಸಭೆ