ಸಾಗರ: “ಮುಂದಿನ ಅವಧಿಯಲ್ಲಿ ಸಹ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಗರ್ ಹುಕುಂ (Bagar Hukum) ಮಂಜೂರಾತಿಗೆ ಇರುವ ಕಾನೂನು ತೊಡಕನ್ನು ಸದನದೊಳಗೆ ಚರ್ಚೆ ಮಾಡಿ ಅದಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಶಾಸಕ ಎಚ್. ಹರತಾಳು ಹಾಲಪ್ಪ ತಿಳಿಸಿದರು.
ಕಂದಾಯ ಇಲಾಖೆ ವತಿಯಿಂದ ಇಲ್ಲಿನ ನಗರಸಭೆ ರಂಗ ಮಂದಿರದಲ್ಲಿ 94 ಸಿ, 94 ಸಿಸಿ ಮತ್ತು ಬಗರ್ ಹುಕುಂ ಅಡಿ 123 ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಗುರುವಾರ (ಮಾ.23) ವಿತರಣೆ ಮಾಡಿ ಅವರು ಮಾತನಾಡಿ, “ಕಳೆದ ತಿಂಗಳು 402 ಜನರಿಗೆ ಹಕ್ಕು ಪತ್ರ ಕೊಡಲಾಗಿತ್ತು. ಈ ದಿನ 123 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಇನ್ನೂ ಸಾವಿರಾರು ಅರ್ಜಿಗಳು ಬಾಕಿ ಇದ್ದು, ಕಾನೂನು ತೊಡಕು ಇರುವುದರಿಂದ ಹಕ್ಕುಪತ್ರ ನೀಡಲು ತೊಡಕಾಗಿದೆ. ಸೊಪ್ಪಿನಬೆಟ್ಟ, ಪರಿಭಾವಿತ ಅರಣ್ಯ, ಗೋಮಾಳ, ಅರಣ್ಯ, ವನ್ಯಜೀವಿ ವಲಯ ಹೀಗೆ ಬೇರೆ ಬೇರೆ ಕಾನೂನಿನ ಸಂಕೋಲೆ ಅರ್ಹರಿಗೆ ಹಕ್ಕು ಪತ್ರ ನೀಡಲು ಸಮಸ್ಯೆ ತಂದೊಡ್ಡಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಯತ್ನ ನಡೆಸಲಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: Election Campaign: ಕಾರ್ಯಕರ್ತರ ಸೆಲ್ಫಿ ಕ್ರೇಜ್‌ಗೆ ಜಾರಿಬಿದ್ದರಾ ತೇಜಸ್ವಿ ಸೂರ್ಯ!?
“ಸಾಗುವಳಿ ಮಾಡುತ್ತಿದ್ದು ಮಂಜೂರಾತಿಗೆ ಅರ್ಜಿ ಸಲ್ಲಿಸಿದವರು ಒಕ್ಕಲೆಬ್ಬಿಸುತ್ತಾರೆ ಎನ್ನುವ ಭಯದಿಂದ ಹೊರಗೆ ಬನ್ನಿ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಅರ್ಹತೆ ಇದ್ದರೆ ಹಕ್ಕು ಪತ್ರ ಖಂಡಿತಾ ಸಿಗುತ್ತದೆ” ಎಂದು ಹೇಳಿದರು.
ಬಗರ್ ಹುಕುಂ ಸಮಿತಿಯ ಸದಸ್ಯರಾದ ಆರ್.ಎಸ್.ಗಿರಿ, ರೇವಪ್ಪ ಹೊಸಕೊಪ್ಪ, ಗಂಗಮ್ಮ, ಲೋಕನಾಥ ಬಿಳಿಸಿರಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹಾಜರಿದ್ದರು.