ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (VSK University) 11ನೇ ವಾರ್ಷಿಕ ಘಟಿಕೋತ್ಸವ (Convocation) ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ (Doctorate) ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಘಟಿಕೋತ್ಸವದಲ್ಲಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿತಾ ಮಿಶ್ರಾ, ಸಮಾಜ ಸೇವೆ ಕ್ಷೇತ್ರದಲ್ಲಿ ಮರಣೋತ್ತರವಾಗಿ ಹಿರೇಹಾಳ್ ಇಬ್ರಾಹಿಂ ಅವರ ಪರವಾಗಿ ಪುತ್ರ ದಾದಾ ಖಲಂದರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮತ್ತೋರ್ವ ಸಾಧಕ ಸಂಗೀತ ಕ್ಷೇತ್ರದಲ್ಲಿ ಪಂಡಿತ ಎಂ.ವೆಂಕಟೇಶ್ ಕುಮಾರ್ ಅವರು ಗೈರಾಗಿದ್ದರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು
ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ರುಬಾನ್.ಎಲ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಹಜಿರಾಜಿ. ಎ ಹಾಗೂ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರದ ರುಷಬ್ ಕುಮಾರ್ ಮೆಹ್ತಾ ಅವರು ತಲಾ 3 ಚಿನ್ನದ ಪದಕಗಳನ್ನು ಪಡೆದರು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದ ಮೋಹನ್ ಕುಮಾರ್ ಆರ್.ಜಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸ್ವಾತಿ. ಎ, ಭೌತಶಾಸ್ತ್ರ ವಿಭಾಗದ ಕಾರ್ತಿಕ್ ರೆಡ್ಡಿ ಎಚ್.ಕೆ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಸಮಾಜಶಾಸ್ತ್ರದ ಸುಮಾ ಕಾಯಣ್ಣನವರ ಹಾಗೂ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಬಿಎಸ್‍ಸಿ ವಿಭಾಗದ ವಿಶಾಲಾಕ್ಷಿ ಇವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ವಿವಿಧ ವಿಭಾಗಗಳ ಒಟ್ಟು 32 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಹಾಗೂ ಸ್ನಾತಕ ಪದವಿಯ 51 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ 72 ಸೇರಿ ಒಟ್ಟು 123 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಇತರರು ಇದ್ದರು.