ಬಳ್ಳಾರಿ: ತಾಲೂಕಿನ ಶ್ರೀಕ್ಷೇತ್ರ ಚೇಳ್ಳಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಶ್ರೀ ಎರ‍್ರಿತಾತನವರ ಜೀವ ಸಮಾಧಿ ಶತಮಾನೋತ್ಸವ (Centenary) ಸಮಾರಂಭಕ್ಕೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಿತು.
ನಾಡಿನ ವಿವಿಧ ಮಠಾಧೀಶರು, ವೀರಶೈವ ಸಮಾಜದ ಹಿರಿಯ ಗಣ್ಯರು ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎರ‍್ರಿತಾತನವರ ಶತಮಾನೋತ್ಸವ ಸಂಭ್ರಮ ಮೇಳೈಸಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಮಾತನಾಡಿ, ಮಹಾಮಹಿಮ ಶ್ರೀ ಎರ‍್ರಿತಾತನವರು ತಪೋಶಕ್ತಿಯ ಸಿದ್ಧಿ ಪಡೆದಿದ್ದ ಮೌನ ಯೋಗಿಗಳಾಗಿದ್ದರು. ತಮ್ಮ ಆಧ್ಯಾತ್ಮಿಕ ತಪಃ ಶಕ್ತಿಯನ್ನು ಸಮಾಜದ ಒಳಿತಿಗೆ ಉಪಯೋಗಿಸಿದರು. ಸದಾ ಧ್ಯಾನಾಸಕ್ತ ಸ್ಥಿತಿಯಲ್ಲಿರುತ್ತಿದ್ದ ತಾತನವರು ಭಕ್ತರ ಉದ್ಧಾರಕ್ಕಾಗಿಯೇ ಧರೆಗಿಳಿದು ಬಂದ ಪವಿತ್ರಾತ್ಮರು ಎಂದು ತಿಳಿಸಿದರು.
ಇದನ್ನೂ ಓದಿ: Elephant killed : 20 ವರ್ಷದ ಹೆಣ್ಣು ಕಾಡಾನೆಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಾಮನಗೌಡ ಮಾತನಾಡಿ, ಅವಧೂತ ಪರಂಪರೆಗೆ ಸೇರಿದ ಶ್ರೀ ಎರ‍್ರಿತಾತನವರ ಪಾದ ಸ್ಪರ್ಶದಿಂದಾಗಿ ಚೇಳ್ಳಗುರ್ಕಿ ಗ್ರಾಮ ಧಾರ್ಮಿಕ ಕೇಂದ್ರವಾಗಿ ಸೆಳೆಯುತ್ತಿದೆ. ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸುತ್ತಿದ್ದು, ಪವಿತ್ರ ಸ್ಥಳವಾಗಿ ಬದಲಾಗಿದೆ ಎಂದರು.
ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ, ಚೇಳ್ಳಗುರ್ಕಿಯ ಶ್ರೀಎರ‍್ರಿತಾತನವರ ಮಠ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಭಕ್ತರ ಇಚ್ಛೆಯಂತೆ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಪರಿಸರ ರಕ್ಷಿಸಿ
ಈ ಭಾಗದ ದೊಡ್ಡ ಕವಿಗಳಾದ ಜೋಳದರಾಶಿ ದೊಡ್ಡನಗೌಡರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಬೇಕು. ಬಿಸಿಲೂರು ಎಂಬ ಹಣೆಪಟ್ಟಿ ಹೊತ್ತಿರುವ ಈ ಜಿಲ್ಲೆ ಮಲೆನಾಡಿನಂತೆ ಬದಲಾಗಬೇಕು. ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: IPL 2023 : ಮುಂದಿನ ವರ್ಷ ನಮ್ದೇ ಹವಾ ಎಂಬ ಮಾತು ಉಳಿಸಿಕೊಂಡ ಮಹೇಂದ್ರ ಸಿಂಗ್ ಧೋನಿ!
ಸಾನಿಧ್ಯ ವಹಿಸಿದ್ದ ಆಂಧ್ರಪ್ರದೇಶದ ಉರವಕೊಂಡ ಉರಗಾದ್ರಿ ಗವಿಮಠ ಸಂಸ್ಥಾನದ ಡಾ.ಕರಿಬಸವ ರಾಜೇಂದ್ರಸ್ವಾಮಿ ಮಾತನಾಡಿ, ಎರ‍್ರಿತಾತನವರು ತತ್ವಸಾಧನೆಯ ನಿಜ ಸಿದ್ಧಿಯ ಮರ್ಮವನ್ನರಿತವರು. ಸದಾ ಧ್ಯಾನದಲ್ಲಿ ಲೀನವಾಗಿರುತ್ತಿದ್ದ ತಾತನವರು, ತಮ್ಮ ಬಳಿ ಬರುತ್ತಿದ್ದ ಭಕ್ತರ ಸಂಕಷ್ಟಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ಪರಿಹಾರ ಮಾಡುತ್ತಿದ್ದರಲ್ಲದೆ, ಹಲವು ಪವಾಡಗಳ ಮೂಲಕ ಜನರ ಸಂಕಷ್ಟಗಳನ್ನು ನಿವಾರಿಸುತ್ತಿದ್ದರು. ಶ್ರೀ ಎರ‍್ರಿತಾತನವರ ಕೃಪಾಶೀರ್ವಾದದಿಂದ ಚೇಳ್ಳಗುರ್ಕಿ ಗ್ರಾಮ ಇಂದು ಯಾತ್ರಾ ಸ್ಥಳವಾಗಿ ಬದಲಾಗಿದೆ. ಶ್ರೀಗಳ ಜೀವ ಸಮಾಧಿಯ ದರ್ಶನ ಪಡೆಯಲು ನಿತ್ಯಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪುನೀತರಾಗುತ್ತಿದ್ದಾರೆ ಎಂದರು.
ಆಂಧ್ರಪ್ರದೇಶದ ಪಾಲ್ತೂರು ಕಲ್ಲುಹೊಳೆಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಮ್ಮರಚೇಡು ಸಂಸ್ಥಾನಮಠದ ಕಲ್ಯಾಣಸ್ವಾಮೀಜಿ ಹಾಗೂ ವೀವಿ ಸಂಘದ ನಿಕಟಪೂರ್ವ ಅಧ್ಯಕ್ಷ ಉಡೇದ ಬಸವರಾಜ ಮಾತನಾಡಿದರು.
ಶ್ರೀ ಎರ‍್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್.ಬಾಳನಗೌಡ ಹಾಗೂ ಶ್ರೀ ಎರ‍್ರಿಸ್ವಾಮಿ ದಾಸೋಹ ಸೇವಾ ಸಂಘದ ಅಧ್ಯಕ್ಷ ಸಿ.ಕೆ.ಪೊಂಪನಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಎರ‍್ರಿತಾತನವರ ಪವಾಡಗಳ ಕುರಿತಾದ ಸ್ಮರಣ ಸಂಚಿಕೆಯನ್ನು ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ 28 ಸಪ್ತಭಜನೆ ತಂಡಗಳ ಮುಖ್ಯಸ್ಥರು ಹಾಗೂ ಹಿರಿಯ ಪತ್ರಕರ್ತ ಸಿ. ಜಿ. ಹಂಪಣ್ಣನವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Formal sector jobs : 2022-23ರಲ್ಲಿ ಇಪಿಎಫ್‌ಒ ಅಡಿಯಲ್ಲಿ ಫಾರ್ಮಲ್ ಸೆಕ್ಟರ್ ಉದ್ಯೋಗಿಗಳ ಸಂಖ್ಯೆ ಹೆಚ್ಚಳ
ವೀವಿ ಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಹಿರಿಯ ವಕೀಲ ಎನ್. ಅಯ್ಯಪ್ಪ ಇತರರು ಪಾಲ್ಗೊಂಡಿದ್ದರು. ಶತಮಾನೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ಶ್ರೀ ಎರ‍್ರಿತಾತನವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.